Advertisement

ಬೆಲೆ ಕುಸಿತ: ಬದನೆ ನಾಶ

12:00 PM Jul 09, 2020 | Naveen |

ಭರಮಸಾಗರ: ಬದನೆಕಾಯಿ ಬೆಲೆ ಕುಸಿತದಿಂದ ಕಂಗಾಲಾದ ರೈತರೊಬ್ಬರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿನ ಬದನೆ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಸೀಗೇಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಪ್ರತಿವರ್ಷದಂತೆ ಈ ವರ್ಷವೂ ಸೀಗೇಹಳ್ಳಿ ಗ್ರಾಮದ ಕರಿಸಿದ್ದಪ್ಪ ಎಂಬುವವರು ಉತ್ತಮ ಆದಾಯದ ನಿರೀಕ್ಷೆಯೊಂದಿಗೆ ಎರಡೂವರೆ ಎಕರೆ ಜಮೀನಿನಲ್ಲಿ ಬೇರೊಬ್ಬರ ತೋಟದ ನೀರನ್ನು ಪಡೆದು ಬದನೆಕಾಯಿ ಬೆಳೆದಿದ್ದರು. ಸಸಿ ನಾಟಿ, ರಸಗೊಬ್ಬರ, ಕೀಟನಾಶಕ ಇತರೆ ಖರ್ಚುಗಳು ಸೇರಿ ಒಂದು ಲಕ್ಷ ರೂ. ಅನ್ನು ಬೆಳೆಗಾಗಿ ವ್ಯಯಿಸಿದ್ದರು. ಉತ್ತಮ ಇಳುವರಿ ಕೂಡ ಬಂದಿತ್ತು. ನಿರೀಕ್ಷಿತ ಆದಾಯದ ಲೆಕ್ಕಾಚಾರದಲ್ಲಿ ಇದ್ದ ಕರಿಸಿದ್ದಪ್ಪನವರಿಗೆ ಲಾಕ್‌ಡೌನ್‌ ಬರಸಿಡಿಲಿನಂತೆ ಬಂದೆರಗಿದೆ. ಬದನೆ ದರ ಪಾತಾಳ ಸೇರಿದೆ. ಮಾರುಕಟ್ಟೆಯಲ್ಲಿ 70 ಕೆಜಿ ತೂಕದ ಬದನೆ ಚೀಲಕ್ಕೆ 210 ರೂ. ದರವಿದೆ. ಕಳೆದ ವರ್ಷ 60,70 ಕೆಜಿ ತೂಕದ ಚೀಲಕ್ಕೆ ತಮಿಳುನಾಡಿನ ಹೊಸೂರು ಮಾರುಕಟ್ಟೆಯಲ್ಲಿ 2000-3000 ರೂ ದರಕ್ಕೆ ಮಾರಿದ್ದರು.

ಕೋವಿಡ್ ಮಹಾಮಾರಿ ಕರ್ನಾಟಕ ಸೇರಿದಂತೆ ಪಕ್ಕದ ತಮಿಳುನಾಡು ರಾಜ್ಯದಲ್ಲಿ ರಣಕೇಕೆ ಹಾಕುತ್ತಿರುವ ಕಾರಣ ಬದನೆಕಾಯಿ ದರ ಕೂಡ ತೀವ್ರ ಕುಸಿತ ಕಂಡಿದೆ. ಹಾಗಾಗಿ ಬಿಡಿಗಾಸಿಲ್ಲದೆ ನಷ್ಟ ಎದುರಿಸಬೇಕಾಗಿದೆ ಎಂಬುದು ರೈತ ಕರಿಸಿದ್ದಪ್ಪ ಅವರ ಅಳಲು. ಬದನೆಕಾಯಿ ಬೆಳೆಗೆ ಹಾಕಿದ ಬಂಡಾವಳವೂ ಇಲ್ಲದೆ ಗಿಡಗಳನ್ನು ಕಿತ್ತು ಹಾಕಿ ಕರಿಸಿದ್ದಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಷ್ಟಕ್ಕೆ ಒಳಗಾದ ರೈತನ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರೈತ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next