Advertisement

ಕುರಿಗಳ ಜೀವ ಹಿಂಡುತ್ತಿದೆ ವಿಚಿತ್ರ ರೋಗ

03:23 PM Nov 08, 2019 | Naveen |

ಎಚ್‌.ಬಿ.ನಿರಂಜನ ಮೂರ್ತಿ

Advertisement

ಭರಮಸಾಗರ: ಇಲ್ಲಿನ ಭರಮಸಾಗರ-ಗೊಲ್ಲರಹಟ್ಟಿ, ಕೊಳಹಾಳು ಗೊಲ್ಲರಹಟ್ಟಿ, ಬೇವಿನಹಳ್ಳಿ, ಇಸಾಮುದ್ರ ಗೊಲ್ಲರಹಟ್ಟಿ, ಮುದ್ದಾಪುರ, ಅಜ್ಜಪ್ಪನಹಳ್ಳಿ ಗ್ರಾಮಗಳಲ್ಲಿ ಕುರಿ ಮತ್ತು ಮೇಕೆಗಳಿಗೆ ವಿಚಿತ್ರ ಕಾಯಿಲೆಯೊಂದು ಕಳೆದ ಹದಿನೈದು ದಿನಗಳಿಂದ ಕಾಡತೊಡಗಿದೆ. ಇದರಿಂದ ಈವರೆಗೆ ಸುಮಾರು 100ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ.

ಮುಖ ಸಪ್ಪಗೆ ಮಾಡಿಕೊಳ್ಳುವುದು, ಬೇಧಿ, ದೊಮ್ಮೆ ದಪ್ಪ ಆಗುವುದು, ಕೆಮ್ಮು, ಸಿಂಬಳ, ಗುರುಗುರು ಶಬ್ದದೊಂದಿಗಿನ ಲಕ್ಷಣಗಳಿರುವ ಈ ಕಾಯಿಲೆ ಕಳೆದ 15 ದಿನಗಳಿಂದ ಹಲವಾರು ಹಳ್ಳಿಗಳಲ್ಲಿ ಕಂಡುಬಂದಿದೆ. ವ್ಯತಿರಿಕ್ತ ಗಾಳಿ ವಾತಾವರಣದಿಂದ ವೈರಸ್‌ ಮೂಲದ ಈ ಕಾಯಿಲೆ ಕುರಿ-ಮೇಕೆಗಳನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.

ಎಚ್‌.ಪಿ, ಪಿಪಿಆರ್‌ ಕಾಯಿಲೆಗಳ ಲಕ್ಷಣಗಳಿಗಿಂತ ಈ ವಿಚಿತ್ರ ಕಾಯಿಲೆಯ ಲಕ್ಷಣಗಳು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ದೊರೆತರೆ ಮಾತ್ರ ಉಳಿಯುತ್ತವೆ. ಇಲ್ಲವಾದರೆ ಚಿಕಿತ್ಸೆಯಿಲ್ಲದೆ ಹೋದರೆ ಒಂದು ರಾತ್ರಿ ಕಳೆಯುವ ವೇಳೆ ರಕ್ತಸ್ರಾವ ಉಂಟಾಗಿ ಸಾವನ್ನಪ್ಪುತ್ತಿವೆ ಎನ್ನುತ್ತಾರೆ ಕುರಿ ಸಾಕಾಣಿಕೆದಾರರು.

ಸುಮಾರು 200 ಮನೆಗಳಿರುವ ಕೊಳಹಾಳು ಗೊಲ್ಲರಹಟ್ಟಿಯಲ್ಲಿ ಹನುಮಂತಪ್ಪ-08, ಸಣ್ಣ ಹಾಲಪ್ಪ-10, ಅವನಪ್ಪ-20, ನೀಲಪ್ಪ-05, ನೀಲಪ್ಪ ಸನ್‌ ಆಫ್‌ ಗುಡ್ಡಪ್ಪ-05, ಸಣ್ಣಪ್ಪ-10 ಸೇರಿ 58ಕ್ಕೂ ಹೆಚ್ಚು ಹಾಗೂ 150 ಮನೆಗಳು, 1000ಕ್ಕೂ ಹೆಚ್ಚು ಸಂಖ್ಯೆಯ ಕುರಿ ಮೇಕೆ ಸಾಕಾಣಿಕೆಯಿರುವ ಭರಮಸಾಗರ ಗೊಲ್ಲರಹಟ್ಟಿಯಲ್ಲಿ ಪೂಜಾರಿ ನಾಗರಾಜ್‌-06, ಪಾಲಪ್ಪ-05, ಭೋವಿ ಮಂಜುನಾಥ್‌-02, ಚಿತ್ರಲಿಂಗಪ್ಪ-02 ಸೇರಿ 15 ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳು ವಿಚಿತ್ರ ಕಾಯಿಲೆಗೆ ಬಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Advertisement

ಕೃಷಿ ಜೊತೆಗೆ ಕೆಲವರು ಕುರಿ ಮೇಕೆ ಸಾಕಾಣಿಕೆ ನಡೆಸಿದರೆ ಕೆಲವರು ಇದನ್ನೇ ಮೂಲ ಉದ್ಯೋಗವನ್ನಾಗಿ ತೊಡಗಿಸಿಕೊಂಡಿದ್ದಾರೆ. (ಕೆಲ ಕುರಿ, ಮೇಕೆ ಸಾಕಾಣಿಕೆದಾರರು ಕಾಲು ಬಾಯಿ ಲಸಿಕೆ ಹಾಕಿಸದೆ ನಿರ್ಲಕ್ಷ್ಯ ತೋರಿದ ಕಾರಣ ಕೆಲ ಕುರಿ, ಮೇಕೆಗಳಲ್ಲಿ ಇದೀಗ ಕಾಲುಬಾಯಿ ರೋಗ ಕೂಡ ಕಾಣಿಸಿಕೊಂಡಿದೆ.) ಚಿತ್ರದುರ್ಗ ತಾಲೂಕಿನ ಕೆಲ ಹಳ್ಳಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕುರಿ ಮೇಕೆಗಳಿಗೆ ಇಂಥ ವಿಚಿತ್ರ ಕಾಯಿಲೆಯ ಭಾದೆ ಕಾಡುತ್ತಿದೆ ಎನ್ನಲಾಗುತ್ತಿದೆ.

ಸಾಲಸೂಲ ಮಾಡಿ ತಂದ ಕುರಿ, ಮೇಕೆಗಳು ಹೀಗೆ ಸಾವನ್ನಪ್ಪಿದರೆ ಸಾಕಾಣಿಕೆದಾರರು ಸಾಲದ ಶೂಲೆಗೆ ಸಿಲುಕುತ್ತಿದ್ದಾರೆ. ಇತ್ತ ಇವುಗಳಿಗೆ ವಿಮೆ ಸೌಲಭ್ಯವಿದೆ. ಆದರೆ ಹಲವು ಸಾಕಾಣಿಕೆದಾರರಿಗೆ ವಿಮೆ ಸೌಲಭ್ಯದ ಮಾಹಿತಿಯೇ ಇಲ್ಲದೆ ಅದರ ಪ್ರಯೋಜನವನ್ನು ಪಡೆಯದೆ ನಷ್ಟ ಎದುರಿಸುತ್ತಿದ್ದಾರೆ. ಎಲ್ಲೆಲ್ಲಿ ಕುರಿ, ಮೇಕೆಗಳ ಸಾಕಾಣಿಕೆಯಿದೆ ಅಲ್ಲೆಲ್ಲ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.ಕೆಲವರು ಮುಂಜಾಗ್ರತೆವಹಿಸಿರುವ ಕಾರಣ ಆಗಬಹುದಾದ ಹಾನಿ ತಪ್ಪಿದೆ ಎಂಬ ಮಾತುಗಳು ಕುರಿ ಸಾಕಾಣಿಕೆದಾರರಲ್ಲಿ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next