Advertisement

Shivamogga ಬದುಕಿದ ಭಾನುಮತಿ 4ನೇ ಮಗು!

01:08 AM Nov 08, 2023 | Team Udayavani |

ಶಿವಮೊಗ್ಗ: ಮೂರು ಮಕ್ಕಳ ಹೆತ್ತರೂ ಬದುಕಿಸಿಕೊಳ್ಳುವ ಯೋಗ ಅವಳಿಗಿರಲಿಲ್ಲ. ಈಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಮಗು ಕೂಡ ಬದುಕುತ್ತದೆಯೇ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮೂರು ಮಕ್ಕಗಳಿಗೆ ಹಾಲುಣಿಸಲಾಗದೆ ನೋವು ಅನುಭವಿಸುತ್ತಿದ್ದ ಭಾನುಮತಿ (ಆನೆ) ಈಗ ಹಾಲುಣಿಸಲು ಶಕ್ತಳಾಗಿದ್ದಾಳೆ. ಮಗಳ ಜತೆ ಈಗ ಮಗುವಾಗಿದ್ದಾಳೆ.

Advertisement

ಇದು ಯಾವುದೋ ಮನೆಯ ಕಥೆ ಅಲ್ಲ, ಸಕ್ರೆಬೈಲು ಆನೆ ಬಿಡಾರದ ಅತಿ ಸೌಮ್ಯ ಸ್ವಭಾವದ ಹೆಣ್ಣಾನೆ ಭಾನುಮತಿ ಕಥೆ.

ಬಾಟಲ್‌ ಹಾಲು ಫ‌ಲ ನೀಡಿರಲಿಲ್ಲ
ಸಕ್ರೆಬೈಲು ಆನೆ ಬಿಡಾರಕ್ಕೆ 2014ರಲ್ಲಿ ಮರಿ ಆನೆ ಜತೆ ಬಂದ ಭಾನುಮತಿಗೆ ಇದು ನಾಲ್ಕನೇ ತಾಯ್ತನ. ಮೂರು ಮರಿಗಳಿಗೂ ಹಾಲುಣಿಸಲು ಸಾಧ್ಯವಾಗದೆ, ಯಾತನೆ ವ್ಯಕ್ತಪಡಿಸಲಾಗದೆ ಒದ್ದಾಡುತ್ತಿತ್ತು. 2021ರಲ್ಲಿ ಜನ್ಮ ನೀಡಿದ್ದ ಮರಿಯನ್ನೂ ಸಹ ಹತ್ತಿರ ಸೇರಿಸುತ್ತಿರಲಿಲ್ಲ. ಹಾಲುಣಿಸುತ್ತಿರಲಿಲ್ಲ. ವೈದ್ಯಾಧಿಕಾರಿಗಳು ಬಾಟಲ್‌ನಲ್ಲಿ ಹಾಲುಣಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನಾಲ್ಕನೇ ಮರಿ ಬದುಕುವುದೇ ಎಂಬ ಅನುಮಾನ ಎಲ್ಲರಿಗೂ ಮೂಡಿತ್ತು. ಆದರೆ ಪ್ರಕೃತಿ ಕೃಪೆಯಿಂದ ಈ ಬಾರಿ ಭಾನುಮತಿ ಹಾಲುಣಿಸಲು ಶಕ್ತವಾಗಿದ್ದು, 4ನೇ ಮಗು (ಆನೆ) ಬದುಕುವ ವಿಶ್ವಾಸ ವ್ಯಕ್ತವಾಗಿದೆ.

ಆನೆ ಬಿಡಾರಗಳಲ್ಲಿ ಯಾವುದೇ ಆನೆ ಮರಿಗಳು ಗರಿಷ್ಠ 2 ವರ್ಷದವರೆಗೂ ತಾಯಿಯ ಜತೆ ಇರುತ್ತವೆ. ಅನಂತರ ಅವುಗಳನ್ನು ಬಲವಂತವಾಗಿ ತಾಯಿಯಿಂದ ಬೇರ್ಪಡಿಸುವ ಕೆಲಸ ನಡೆಯುತ್ತದೆ. ಈ ದೃಶ್ಯ ನೋಡಿದ ಯಾರಿಗೂ ಮನಸ್ಸು ಕರಗದೆ ಇರದು. ಆದರೆ ಭಾನುಮತಿ ಹಸುಗೂಸುಗಳನ್ನೇ ದೂರ ಮಾಡಿದ್ದು ಮನಸ್ಸಿಗೆ ಭಾರ ಮಾಡಿತ್ತು. ಭಾನುಮತಿಯ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದ್ದು ಬಿಡಾರದ ಸಿಬಂದಿಯಲ್ಲಿ ಸಂತಸ ಮೂಡಿದೆ.

ಬಾಲಕ್ಕೆ ಕತ್ತಿ ಹಾಕಿದ್ದು ಸಿಬಂದಿಯೇ
ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಕತ್ತಿ ಹಾಕಿದ್ದು ಬಿಡಾರದ ಸಿಬ್ಬಂದಿಯೇ ಎಂದು ತಿಳಿದುಬಂದಿದೆ. ಆದರೆ ಘಟನೆ ಅಚಾತುರ್ಯದಿಂದ ಆಗಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಆನೆಗಳನ್ನು ಕಾಡಿಗೆ ಬಿಡುವಾಗ ಮರದ ಕೊಂಬೆ, ಗಿಡಗಳನ್ನು ಕಡಿಯಲು ಕತ್ತಿ, ಇತರೆ ವಸ್ತುಗಳನ್ನು ಕೊಂಡೊಯ್ಯಲಾಗುತ್ತದೆ. ಈ ವೇಳೆ ಅಚಾರ್ತುಯದಿಂದ ಸಿಬಂದಿಯಿಂದಲೇ ಕತ್ತಿ ಏಟು ಬಿದ್ದಿದೆ. ಭಾನುಮತಿ ಆನೆ ನೋಡಿಕೊಳ್ಳುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಬಿಡಾರದಲ್ಲಿನ ಸಿಬ್ಬಂದಿಯ ಆಂತರಿಕ ಸಂಘರ್ಷದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿತ್ತು. ಇದನ್ನು ಅಧಿಕಾರಿಗಳು ಅಲ್ಲಗೆಳೆದಿದ್ದಾರೆ.

Advertisement

ಭಾನುಮತಿ ಆನೆ ಮರಿಯೊಂದಿಗೆ ಬೆರೆಯುತ್ತಿದೆ, ಹಾಲುಣಿಸುತ್ತಿದೆ. ಈ ಹಿಂದೆ ಮೂರು ಮರಿಗಳು ಅವಧಿಪೂರ್ವ ಪ್ರಸವವಾಗಿದ್ದರಿಂದ ತಾಯಿಗೆ ಹಾಲುಣಿಸುವ ಶಕ್ತಿ ಇರಲಿಲ್ಲ ಎಂದು ಅಂದಾಜಿಸಲಾಗಿದೆ. ಈ ಬಾರಿ ಆ ಸಮಸ್ಯೆ ಇಲ್ಲ. ಮರಿ ಜತೆ ಆಟವಾಡಿಕೊಂಡು ಚೆನ್ನಾಗಿದೆ. ಅದರ ತಾಯ್ತನವನ್ನು ಅನುಭವಿಸಲು ಬೇರೆ ಆನೆಗಳನ್ನು ಕಟ್ಟುತ್ತಿಲ್ಲ.
– ಪ್ರಸನ್ನ ಕೃಷ್ಣ ಪಟಗಾರ್‌, ಡಿಎಫ್‌ಒ, ವನ್ಯಜೀವಿ ವಲಯ

Advertisement

Udayavani is now on Telegram. Click here to join our channel and stay updated with the latest news.

Next