ಶಹಾಬಾದ: ಜಿಲ್ಲೆಯ ಔದ್ಯೋಗಿಕ ನಗರವೆಂದೇ ಹೆಸರಾದ ಶಹಾಬಾದ ಸಮೀಪದ ಭಂಕೂರ ಗ್ರಾಮದ ಶಾಂತನಗರದಲ್ಲಿನ ಶಹಾಬಾದ ಬಸವ ಸಮಿತಿ ಸಂಸ್ಥೆಗೆ 40 ವರ್ಷಗಳಾದರೆ, ಅದರ ಅಡಿಯಲ್ಲಿ ಕಳೆದ 25 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಫೆಬ್ರವರಿ 10ರಂದು ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ.
ರಾಜ್ಯದ ವಿವಿಧ ಭಾಗಗಳಿಂದ ಕಾಯಕಕ್ಕಾಗಿ ಬಂದ ಶಹಾಬಾದ ನಗರದ ಎಬಿಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಲಿಂಗಾಯತ ಸಮಾಜದ ಕಾರ್ಮಿಕರು ಸೇರಿ ಈ ಸಂಸ್ಥೆ ಹುಟ್ಟುಹಾಕಿ 40 ವರ್ಷಗಳಾಗಿವೆ.
ಮೊದಲು ಒಬ್ಬರಿಗೊಬ್ಬರು ಕಷ್ಟದ ಸಮಯದಲ್ಲಿ ನೆರವಾಗುವ ದೃಷ್ಟಿಯಿಂದ ಬಸವ ಬ್ಯಾಂಕ್ ಹುಟ್ಟು ಹಾಕಲಾಗಿತ್ತು. ಎಬಿಎಲ್ ಕಾಲೋನಿಯಲ್ಲಿರುವ ಎಂಸಿಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕರು ದುಬಾರಿ ಹಣ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಸಹಾಯಕರಾಗಿದ್ದನ್ನು ಗಮನಿಸಿ, ಕನ್ನಡ ಮಾಧ್ಯಮ ಶಾಲೆಯೊಂದನ್ನು ತೆರೆಯಲು ನಿರ್ಧರಿಸಲಾಗಿತ್ತು.
ಇದಕ್ಕೂ ಮುನ್ನ ಶಾಲೆ ನಡೆಸುವುದು ಕಷ್ಟದ ಕೆಲಸ. ಕಾರ್ಯಾಲಯ, ಬಸವ ಮಂಟಪ ನಿರ್ಮಿಸಿ ಎಂದು ಸಂಸ್ಥೆಯ ಸದಸ್ಯರು ಹೇಳಿದ್ದರು. ಅಂದು ಬಸವ ಮಂಟಪ ಉದ್ಘಾಟಿಸಿ ಮಾತನಾಡಿದ, ರಾವೂರ ಗ್ರಾಮದ ಸಿದ್ಧಲಿಂಗ ಮಹಾಸ್ವಾಮೀಜಿ ಈ ಭಾಗದಲ್ಲಿ ಒಳ್ಳೆಯ ಶಾಲೆಯಿಲ್ಲ. ಗುಣಮಟ್ಟದ ಶಾಲೆ ತೆರೆಯಿರಿ ಎಂದು ಸಲಹೆ ನೀಡಿದ್ದರು.
ಅವರ ಸಲಹೆಯಂತೆ ಕನ್ನಡಕ್ಕೆ ಅಮೂಲ್ಯ ಕೊಡುಗೆ ನೀಡುವ ಉದ್ದೇಶದಿಂದ ಸಂಸ್ಥೆ ಸದಸ್ಯರೆಲ್ಲ ಬಸವ ಸಮಿತಿ ಕನ್ನಡ ಪ್ರಾಥಮಿಕ ಶಾಲೆಯನ್ನು 1992-1993ರಲ್ಲಿ ಪ್ರಾರಂಭಿಸಿದರು.
ಪ್ರಾರಂಭದಲ್ಲಿ ಬಸವಮಂಟಪ ಹಾಗೂ ಎರಡು ಕೋಣೆಗಳಲ್ಲಿ ಕೇವಲ 30 ಮಕ್ಕಳಿಂದ ಪ್ರಾರಂಭವಾದ ಶಾಲೆ ಇಂದು 30ಕ್ಕೂ ಹೆಚ್ಚು ಕೋಣೆಗಳನ್ನು, ಸುಮಾರು 800 ವಿದ್ಯಾರ್ಥಿಗಳು, 30ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಹೊಂದಿದೆ.
2015-16ನೇ ಸಾಲಿನಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಚಿತ್ತಾಪುರ ತಾಲೂಕಿನ ಐದು ಪ್ರಮುಖ ಶಾಲೆಗಳಲ್ಲಿ ಈ ಶಾಲೆಯೂ ಒಂದಾಗಿದೆ. ಶಾಲೆ ಪ್ರಗತಿಗೆ ಲಯನ್ಸ್ ಕ್ಲಬ್, ಲೇಡಿಸ್ ಕ್ಲಬ್, ವಿದ್ಯಾಭಾರತಿ ಸೇಡಂ, ಅಲಸ್ಟಾಂ ಕಾರ್ಖಾನೆ, ಸ್ಥಳೀಯ ಉದ್ದಿಮೆದಾರರು ಹಾಗೂ ಸಾರ್ವಜನಿಕರು ಕೈ ಜೋಡಿಸಿದ್ದಾರೆ.
ಮಲ್ಲಿನಾಥ ಪಾಟೀಲ