Advertisement

Kundapura: ಪಂಚ ಗಂಗಾವಳಿ ಹೂಳೆತ್ತಲು ಅನುದಾನಕ್ಕೆ ಸಚಿವರಿಗೆ ಭಂಡಾರಿ ಮನವಿ

12:34 PM Jul 29, 2024 | Team Udayavani |

ಕುಂದಾಪುರ: ಪುರಸಭಾ ವ್ಯಾಪ್ತಿಯ ಪಂಚಗಂಗಾವಳಿ ನದಿಯನ್ನು ಅವಲಂಬಿತರಾಗಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ಸುಮಾರು ದಶಕಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಇಲ್ಲಿ ಹೂಳುತುಂಬಿ ಕಷ್ಟವಾಗಿದ್ದು ತೆರವು ಮಾಡಬೇಕೆಂದು ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ ಅವರು ಮೀನುಗಾರಿಕೆ ಸಚಿವ ಮಂಕಾಳ್‌ ವೈದ್ಯ ಅವರಿಗೆ ಜು. 27ರಂದು ಮನವಿ ಮಾಡಿದ್ದಾರೆ.

Advertisement

ಹೂಳು ತುಂಬಿದ ನದಿ

ನದಿ ತೀರದ ಕುಟುಂಬಗಳ ಮೂಲಕ ಮೀನುಗಾರಿಕೆ, ಚಿಪ್ಪು ಹೆಕ್ಕುವುದು, ಮೀನು ಸಾಕಾಣಿಕೆ, ದೋಣಿ ಚಲಿಸುವಂತದ್ದು,6 ಪ್ರವಾಸೋದ್ಯಮ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿರುತ್ತದೆ. ಈ ಹಿಂದೆ ಈ ನದಿ ಪಾತ್ರದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿತ್ತು. ಹಾಗಾಗಿ ಇದರ ಪರಿಣಾಮ ನದಿ ಪಾತ್ರದಲ್ಲಿ ಯಾವುದೇ ಹೂಳು ಶೇಖರಣೆಯಾಗುತ್ತಿರಲಿಲ್ಲ. ನದಿಯು ಆಳವಾಗಿಯೂ ಹಾಗೂ ದೋಣಿಗಳು ಸರಾಗವಾಗಿಯೂ ಚಲಿಸುತ್ತಿತ್ತು. ಆದರೆ ಇತ್ತೀಚಿಗೆ ಹೊಸ ಕಾನೂನಿನ ಪರಿಣಾಮ ಯಾವುದೇ ಮರಳುಗಾರಿಕೆ ಇಲ್ಲಿ ನಡೆಯುತ್ತಿಲ್ಲ. ಹಾಗಾಗಿ ನದಿಯಲ್ಲಿ ಹೂಳು ಶೇಖರಣೆಗೊಂಡು ನದಿ ಪಾತ್ರ ತುಂಬಿರುತ್ತದೆ.

ನೆರೆ ಭೀತಿ

ಹೂಳಿನಿಂದ ನದಿಯನ್ನು ಮುಚ್ಚಿದಂತೆ ಆಗಿದ್ದು, ಮಳೆಗಾಲದಲ್ಲಿ ಕೃತಕ ನೆರೆ ಬಂದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ನದಿ ಪಾತ್ರ ಹೂಳಿನಿಂದ ಮುಚ್ಚಿರುವುದರಿಂದ ದೋಣಿಗಳು ಯಾವುದೇ ದಿಕ್ಕಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಇಳಿತ ಕಾಲದಲ್ಲಿಯೂ ನದಿ ಮೈದಾನದಂತೆ ಮತ್ತು ಮರುಭೂಮಿಯಂತೆ ಗೋಚರಿಸುತ್ತದೆ. ಇದರ ಪರಿಣಾಮ ಇಲ್ಲಿ ಇತ್ತೀಚಿಗೆ ಕಾಂಡ್ಲಾ ಗಿಡಗಳು ಬೆಳೆದಿದ್ದು, ಅರಣ್ಯ ಇಲಾಖೆ ಇದನ್ನು ತೆರವುಗೊಳಿಸಲು ಬಿಡುತ್ತಿಲ್ಲ.

Advertisement

ಬದುಕು ದುಸ್ತರ

ಈ ಎಲ್ಲ ಕಾರಣಗಳಿಂದ ಮೀನುಗಾರ ಕುಟುಂಬಗಳ ದೈನಂದಿನ ಬದುಕು ಹಾಗೂ ನದಿಯನ್ನು ಅವಲಂಬಿತರಾದ ಸಮಾಜದವರ ಜೀವನ ಬಹಳ ಸಂಕಷ್ಟಕ್ಕೀಡಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಅವಕಾಶಗಳು ಕುಂಠಿತವಾಗಿವೆ. ಈ ಕುರಿತಂತೆ ಪಂಚಗಂಗಾವಳಿ ನದಿ ತೀರದ ಮೀನುಗಾರ ಸಮುದಾಯದ ಜನರು ಈ ಸಮಸ್ಯೆಗಳನ್ನು ಬಗೆಹರಿಸುವಂತೆ ನನ್ನಲ್ಲಿ ಮನವಿ ಮಾಡಿದ್ದಾರೆ. ಆದ್ದರಿಂದ ಈ ಕುರಿತು ತಾವು ಪರಿಶೀಲಿಸಿ ಮೀನುಗಾರ ಸಮುದಾಯದ ಜನರಿಗೆ ಅನುಕೂಲವಾಗುವಂತೆ ಹಾಗೂ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕರಿಸುವ ರೀತಿಯಲ್ಲಿ ತಮ್ಮ ಇಲಾಖೆಯ ಮೂಲಕ ಸೂಕ್ತ ಕ್ರಮವಹಿಸುವಂತೆ ಡಾ| ಭಂಡಾರಿ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ಸುದಿನ ವರದಿ
ಪಂಚಗಂಗಾವಳಿಯಲ್ಲಿ ಹೂಳು ತುಂಬಿ ದೋಣಿ ಹೋಗಲು ಕಷ್ಟವಾಗುತ್ತಿದೆ, ಪ್ರವಾಸೋದ್ಯಮಕ್ಕೆ ಕಂಟಕವಾಗಲಿದೆ, ನೆರೆ ಭೀತಿ ಇದೆ ಎಂದು ಉದಯವಾಣಿ ಸುದಿನ ಜೂ.10ರಂದು ಕುಂದಾಪುರ ನಗರಕ್ಕೆ ನೆರೆ ಭೀತಿ ಸಾಧ್ಯತೆ ಎಂದು ವರದಿ ಮಾಡಿತ್ತು. ಡಾ| ಭಂಡಾರಿ ಅವರು ಈ ವರದಿಯನ್ನು ಸಚಿವರಿಗೆ ಮನವಿ ಜತೆಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next