ಭಾಲ್ಕಿ: ಸರ್ಕಾರದ ಅಭಿವೃದ್ಧಿ ಕಾರ್ಯಗಳ ಗುರಿ ತಲುಪಲು, ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರ ಕಾರ್ಯಕ್ಷಮತೆ ಅವಶ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ, ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಜಿಲ್ಲಾ ತರಬೇತಿ ಸಂಸ್ಥೆ ಬೀದರ ವತಿಯಿಂದ, ಎಲ್ಲ ಇಲಾಖೆಗಳ ಸಿ ಗ್ರುಪ್ ನೌಕರರಿಗಾಗಿ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳು ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಕೇಂದ್ರದ ಸುಸ್ಥಿರ ಅಭಿವೃದ್ಧಿ ಗುರಿಗಳು ಕಾರ್ಯರೂಪಕ್ಕೆ ಬರಬೇಕಾದರೆ ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಸರ್ಕಾರಿ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾಗಿ ಬಿ ಮತ್ತು ಸಿ ಗ್ರುಪ್ ಸಿಬ್ಬಂದಿಯವರು ಸರ್ಕಾರದ ಎಲ್ಲ ಯೋಜನೆಗಳ ಅಭಿವೃದ್ಧಿ ಕಾರ್ಯಗಳು ಸುಸ್ಥಿರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ತಾವು ಮಾಡುವ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಕಾರ್ಯನಿರ್ವಹಿಸಿದರೆ, ಅಭಿವೃದ್ಧಿ ಯೋಜನೆಗಳು ಉತ್ತಮವಾಗಿ
ಕಾರ್ಯರೂಪಕ್ಕೆ ಬರುವವು. ಹೀಗಾಗಿ ಎಲ್ಲ ಸಿ ಗ್ರುಪ್ ಸಿಬ್ಬಂದಿ ಕೆಲಸದಲ್ಲಿ ಗಮನವಿಟ್ಟು ಕಾರ್ಯ ನಿರ್ವಹಿಸಬೇಕು ಎಂದರು.
ತಾಪಂ ಯೋಜನಾಧಿಕಾರಿ ಸಂತೋಷ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ತರಬೇತಿ ಸಂಪನ್ಮೂಲ ವ್ಯಕ್ತಿ ರಜಿಯಾ ಬಳಬಟ್ಟೆ ಸುಸ್ಥಿರ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಕಿರಣಕುಮಾರ, ಜಿ.ತ. ಸಂಸ್ಥೆ ಉಪ ಬೋಧಕ ಜೀತೇಂದ್ರ ಉಪಸ್ಥಿತರಿದ್ದರು. ರಾಜೇಂದ್ರ ಮಾಳಿ ಸ್ವಾಗತಿಸಿದರು. ಗಣಪತರಾವ ಕಲ್ಲೂರೆ ನಿರೂಪಿಸಿದರು.