ಭಾಲ್ಕಿ: ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಇಂಥ ಕನ್ನಡ ಭಾಷೆ ಬೆಳವಣಿಗೆಗೆ ಗಡಿ ಭಾಗದಲ್ಲಿ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಟೌನ್‌ಹಾಲ್ನಲ್ಲಿ ನಡೆದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವುದು ಅತ್ಯಗತ್ಯವಾಗಿದೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಲು ಇಂತಹ ವೇದಿಕೆ ಸೂಕ್ತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಯವರು ಗಡಿನಾಡಿನಲ್ಲಿ ಕನ್ನಡ ಕಲಿಸುವ ಕಾರ್ಯ ಮಾಡಬೇಕು. ಸಾಹಿತ್ಯ ಜಾತ್ರೆಗಳು ಬರೀ ಜಾತ್ರೆಗಳಾಗಿ ಉಳಿಯಬಾರದು. ಇದರಿಂದ ಕನ್ನಡ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಇದೇ ವೇಳೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ತಾಲೂಕು ಅಧ್ಯಕ್ಷ ಶಶಿಧರ ಕೋಸಂಬೆ, ಗೌರವ ಕಾರ್ಯದರ್ಶಿ ರಮೇಶ ಚಿದ್ರಿ, ಹಣಮಂತ ಕಾರಾಮುಂಗೆ, ಬಾಲಾಜಿ ಕಾಂಬಳೆ, ಗಣಪತಿ ಬೋಚರೆ, ಸುರೇಶ ಕನಶೆಟ್ಟಿ, ನಾಗಶೆಟ್ಟಿ ಚೋಳಾ, ಸೋಮನಾಥ ಹೊಸಾಳೆ, ಧರ್ಮಣ್ಣ ನೀಲಗಲ್, ಸಂಗಮೇಶ ಹುಣಜೆ, ಸಂಗಮೇಶ ಗುಮ್ಮೆ, ಕಾಶೀನಾಥ ಲದ್ದೆ, ಜಯರಾಜ ದಾಬಶೆಟ್ಟಿ ಸೇರಿದಂತೆ ಹಲವರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಸ್ವಾಗತಿಸಿದರು. ಪ್ರೊ| ಚಂದ್ರಕಾಂತ ಬಿರಾದಾರ ನಿರೂಪಿಸಿದರು. ಚಂದ್ರಕಲಾ ಪ್ರಭು ಡಿಗ್ಗಿ ವಂದಿಸಿದರು.