Advertisement

ಗ್ರಾಮೀಣ ಅಂಗನವಾಡಿ ಕೇಂದ್ರಗಳೇ ಉತ್ತಮ

12:12 PM Mar 15, 2020 | Naveen |

ಭಾಲ್ಕಿ: ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳು ಎಲ್ಲಿವೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣ ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಕೇಂದ್ರಗಳು ಸುವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು, ಕಾರ್ಯಕರ್ತೆಯರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ.

Advertisement

ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 33 ಅಂಗನವಾಡಿ ಕೇಂದ್ರಗಳಲ್ಲಿ 2 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿ, 3 ಕೇಂದ್ರಗಳು ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿವೆ. ಉಳಿದ 33 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಈ ಬಾಡಿಗೆ ಕಟ್ಟಡದ ಅಂಗನವಾಡಿ ಕೇಂದ್ರಗಳು ಎಲ್ಲಿವೆ ಎನ್ನುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಿಲ್ಲದಾಗಿದೆ.

ತಾಲೂಕಿನಲ್ಲಿ ಮಂಜೂರಾದ 339 ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನುವ ಮಾಹಿತಿ ಇದೆ. ಇವುಗಳಲ್ಲಿ 214 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. 7 ಕೇಂದ್ರಗಳು ಪಂಚಾಯತ್‌ ಕಟ್ಟಡದಲ್ಲಿ, 12 ಕೇಂದ್ರಗಳು ಸಮುದಾಯ ಭವನದಲ್ಲಿ ನಡೆಯುತ್ತಿದ್ದರೆ 6 ಕೇಂದ್ರಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, 30 ಕೇಂದ್ರಗಳು ಶಾಲೆಯ ಕಟ್ಟದಲ್ಲಿ ನಡೆಯುತ್ತಲಿವೆ. 70 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎನ್ನುವ ಮಾಹಿತಿ ಇದೆ. ಆದರೆ ಪಟ್ಟಣದಲ್ಲಿರುವ 33 ಕೇಂದ್ರಗಳಲ್ಲಿ ಕೇವಲ 2 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡದಲ್ಲಿರುವುದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ಪಟ್ಟಣದ ಫಲಾನುಭವಿಗಳು.

ಇನ್ನು ಮೂಲಭೂತ ಸೌಕರ್ಯಗಳ ಬಗ್ಗೆ ನೋಡಿದರೂ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರದವರೇ ಮುಂದಿದ್ದಾರೆ. ಗ್ರಾಮೀಣ ಭಾಗದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮನೆ, ಕೈತೋಟ, ಶೌಚಾಲಯ, ನೀರು, ವಿದ್ಯುತ್‌, ಕಾಂಪೌಂಡ್‌, ಆಟದ ಮೈದಾನ, ಗ್ಯಾಸ್‌ ವ್ಯವಸ್ಥೆ, ಫ್ಯಾನ್‌ ವ್ಯವಸ್ಥೆ ಸುವ್ಯವಸ್ಥಿತವಾಗಿದೆ. ಆದರೆ ಪಟ್ಟಣದ ಬಾಡಿಗೆ ಕೇಂದ್ರಗಳಲ್ಲಿರುವ ಅಂಗನವಾಡಿ ಕೇಂದ್ರಗಳು ಎಲ್ಲಿವೆ ಎನ್ನುವುದೇ ಸಾರ್ವಜನಿಕರಿಗೆ ತಿಳಿಯದಾಗಿದೆ.

ಇನ್ನು 6 ತಿಂಗಳಿನಿಂದ 3 ವರ್ಷದ ಮಕ್ಕಳಿಗೆ ಆಹಾರದ ಪ್ರಮಾಣ ಸರಿಯಾಗಿ ನೀಡುವ ವ್ಯವಸ್ಥೆ ಇದೆ. ಅಲ್ಲದೇ ಮಾತೃಪೂರ್ಣ ಯೋಜನೆಯ ಅಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಇದೆಲ್ಲವೂ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ನೋಡಲು ಸಿಗುತ್ತದೆ. ಆದರೆ ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಇದ್ಯಾವುದೂ ದೊರೆಯದಂತಾಗಿದೆ.

Advertisement

ಗ್ರಾಮೀಣ ಭಾಗದ ಕೆಲವು ಅಂಗನವಾಡಿ ಕೇಂದ್ರಗಳಂತೂ ಮಾದರಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಅವುಗಳಲ್ಲಿ ತಾಲೂಕಿನ ನಿಡೇಬನ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರ ಮಾದರಿಯಾಗಿದೆ. ಇದು ಕಾನ್ವೆಂಟ್‌ ಶಾಲೆಗಳನ್ನೂ ಮೀರಿಸುವ ವ್ಯವಸ್ಥೆ ಹೊಂದಿದೆ.

ಇದೊಂದೇ ಅಂಗನವಾಡಿ ಕೇಂದ್ರ ತಾಲೂಕಿನ ಎಲ್ಲ ಶಾಲೆಗಳಿಗೂ ಮಾದರಿಯಾಗಿದೆ. ನಿಡೆಬಾನ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶಿಸಿದರೆ, ಹೊಸ ಅನುಭವವಾಗುತ್ತದೆ. ಇದು ಅಂಗನವಾಡಿ ಕೇಂದ್ರವೋ ಅಥವಾ ಪ್ರತಿಷ್ಠಿತ ಶಾಲೆಯೋ ಎಂದು ಭಾಸವಾಗುತ್ತದೆ. ಅಂಗನವಾಡಿ ಕೇಂದ್ರದ ಸುತ್ತುಗೋಡೆಯ ಒಳಗೆ ಪ್ರವೇಶ ಮಾಡಿದ ತಕ್ಷಣ ಸುಂದರವಾದ ತೋಟ ನಮ್ಮನ್ನು ಸ್ವಾಗತಿಸುತ್ತದೆ. ಯಾವ ನಗರಗಳ ಶಾಲೆಗಳಲ್ಲಿಯೂ ಇಂತಹ ತೋಟವನ್ನು ಕಂಡ ಅನುಭವ ಬರುವುದಿಲ್ಲ. ನಂತರ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶಿಸಿದರೆ, ಮಕ್ಕಳಿಗೆ ಎಲ್ಲ ರೀತಿಯ ಆಟಿಕೆಗಳು ದೊರೆಯುತ್ತವೆ. ಮಕ್ಕಳು ಈ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶಿಸಿದ ತಕ್ಷಣ ತಮ್ಮ ಮನೆಯನ್ನೇ ಮರೆತು ಬಿಡುತ್ತಾರೆ. ಅಂತಹ ಸುಂದರ ಪರಿಸರ ಈ ಅಂಗನವಾಡಿ ಕೇಂದ್ರದಲ್ಲಿದೆ.

ಅಲ್ಲದೇ ಇಂತಹದೇ ವ್ಯವಸ್ಥೆ ತಾಲೂಕಿನ ಚಳಕಾಪೂರ ಅಂಗನವಾಡಿ ಕೇಂದ್ರದಲ್ಲಿ ಕಂಡು ಬರುತ್ತದೆ. ಇಲ್ಲಿ ಪ್ರತಿವಾರ ವ್ಯವಸ್ಥೆಯಂತೆ ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕ ಆಹಾರ ನೀಡುವ ವ್ಯವಸ್ಥೆ ಅವಿಭಕ್ತ ಕುಟುಂಬವನ್ನೂ ಮೀರಿಸುವಂತಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವಂತೆ ಪಟ್ಟಣದಲ್ಲಿಯೂ ಅಂಗನವಾಡಿ ಕೇಂದ್ರಗಳು ನಡೆಯುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

„ಜಯರಾಜ ದಾಬಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next