Advertisement

ಸ್ಪರ್ಧಾ ಮನೋಭಾವವಿದ್ದರೆ ಜೀವನದಲ್ಲಿ ಯಶಸ್ಸು

06:35 PM Oct 05, 2019 | Team Udayavani |

ಭಾಲ್ಕಿ: ದೇಶದ ಭವಿಷ್ಯ ಆಗಿರುವ ವಿದ್ಯಾರ್ಥಿಗಳು ಓದಿನ ಜತೆಗೆ ಸ್ಪರ್ಧಾ ಮನೋಭಾವದಿಂದ ಮುನ್ನುಗ್ಗಿದಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

Advertisement

ಕೋನ ಮೇಳಕುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾ ಧಿಕಾರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ “ಅಚ್ಚು ಮೆಚ್ಚಿನ ಪುಸ್ತಕ’ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯಿರುತ್ತದೆ. ಸುಪ್ತ ಪ್ರತಿಭೆ ಹೊರ ಹೊಮ್ಮಲು ಪೂರಕ ವ್ಯವಸ್ಥೆ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಅಧ್ಯಯನದ ಜತೆಗೆ ಜ್ಞಾನರ್ಜನೆಗೆ ಅನುಗುಣವಾಗಿ ನಡೆಯುವ ಸ್ಪರ್ಧೆಯಲ್ಲಿ ಸೋಲು ಗೆಲುವು ಲೆಕ್ಕಿಸದೇ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲಾ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಶಾಲೆಯ ಮುಂಭಾಗದಲ್ಲಿ ಸುತ್ತುಗೋಡೆ ನಿರ್ಮಿಸಲಾಗಿದೆ. ಉಳಿದ ಕೆಲಸವನ್ನೂ ಶೀಘ್ರವೇ ಮುಗಿಸಲಾಗವುದು. ಕುಡಿವ ನೀರು ಪೂರೈಕೆಗೆ ಈಗಾಗಲೇ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಕೊಳವೆ ಬಾವಿಗೆ ನೀರಿನ ಮೂಲ ಕಡಿಮೆ ಆಗಿರುವುದನ್ನು ಶಿಕ್ಷಕರಿಂದ ಮಾಹಿತಿ ಪಡೆದು ಕೊಂಡಿದ್ದೇನೆ. ಅಗತ್ಯ ಬಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕಿ ಸುನೀತಾ ದಾಡಗೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ
ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಶಾಲೆಯಲ್ಲಿ ಪ್ರತಿ ತಿಂಗಳು ರಸಪ್ರಶ್ನೆ, ಭಾಷಣ ಸ್ಪರ್ಧೆ ಸೇರಿದಂತೆ ನಾನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ ಬೆಳೆಯಲು ಸಹಾಯಕವಾಗುತ್ತದೆ ಎಂದು ಹೇಳಿದರು.

Advertisement

ಮುಖ್ಯಶಿಕ್ಷಕಿ ತಯಬಾ ಫಾತಿಮಾ ಅಧ್ಯಕ್ಷತೆ ವಹಿಸಿದರು. ಸಾಹಿತಿ ಕೀರ್ತಿಲತಾ ಹೊಸಾಳೆ, ಲಖಣಗಾಂವ ಸರಕಾರಿ ಮಾದರಿಯ ಶಾಲೆಯ ಶಿಕ್ಷಕ ಮಹಾದೇವ ಮಡಿವಾಳ ತೀರ್ಪುಗಾರರಾಗಿ ಭಾಗವಹಿಸಿದ್ದರು. ಭಾಲ್ಕಿಯ ಪಟ್ನೆ ಪ್ರಿಂಟರ್ಸ್‌ನ ಶಿವಕುಮಾರ ಚಂದ್ರರಂಗೆ, ನಂದರಾಜ ಬಿರಾದಾರ್‌, ಮೇಹರ್‌ ಬೇಗಂ ಸೇರಿದಂತೆ ಹಲವರು ಇದ್ದರು. ಲತಾ ಮನ್ನಳಿಕರ್‌ ಸ್ವಾಗತಿಸಿದರು. ಶಿವಕುಮಾರ
ಹಾಲಹಳ್ಳಿ ನಿರೂಪಿಸಿ, ವಂದಿಸಿದರು.

ಬಹುಮಾನ ವಿತರಣೆ: ಅಚ್ಚು ಮೆಚ್ಚಿನ ಪುಸ್ತಕ ರಸಪ್ರಶ್ನೆ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ಮೂರು ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿಗಳಾದ ಅಂಜಲಿ ಚಂದ್ರಕಾಂತ, ತೇಜಸ್ವಿನಿ ಸೂರ್ಯಕಾಂತ, ಅರ್ಚನಾ ಮನೋಹರ್‌, ಶಿವಾನಿ ಮಲ್ಲಿಕಾರ್ಜುನ್‌ ಅವರಿಗೆ ಸ್ವಾಮಿ ವಿವೇಕಾನಂದರ ಪುಸ್ತಕ ಕಾಣಿಕೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next