ಭಾಲ್ಕಿ: ಮುಂಗಾರು ಹಂಗಾಮು ಮುಗಿಯುತ್ತ ಬಂದರೂ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ವಾಡಿಕೆಯಂತೆ ಮಳೆಯಾಗದ ಕಾರಣ ಪಟ್ಟಣದಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆ ಮುಂದುವರಿದಿದೆ.
ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಬೇಸಿಗೆಯಲ್ಲಿ ಆರಂಭಿಸಿದ ಟ್ಯಾಂಕರ್ ನೀರು ಇಂದಿಗೂ ಮುಂದುವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಪ್ರತಿನಿತ್ಯ ಪಟ್ಟಣಕ್ಕೆ 75 ಟ್ಯಾಂಕರ್ ನೀರು ಪೂರೈಸಲಾಗುತ್ತಿತ್ತು. ಕಳೆದ ತಿಂಗಳಲ್ಲಿ ಸ್ವಲ್ಪ ಮಳೆಯಾದ್ದರಿಂದ ಕೆಲವು ಮನೆಗಳಲ್ಲಿಯ ಕೊಳವೆ ಬಾವಿಗಳಿಗೆ ಅಲ್ಪಸ್ವಲ್ಪ ನೀರು ಬಂದಿದ್ದು, ಈಗ ಪ್ರತಿನಿತ್ಯ 40ರಿಂದ 45 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ಸುಮಾರು 45 ಸಾವಿರ ಜನ ವಾಸವಗಿದ್ದಾರೆ. 27 ವಾರ್ಡ್‌ಗಳಿದ್ದು, ಪುರಸಭೆಯಲ್ಲಿ 27 ಸದಸ್ಯರ ಬಲವಿದೆ. ಪಟ್ಟಣ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಆದರೆ ಅವುಗಳಲ್ಲಿ ಮಳೆಗಾಲದಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ.
ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ದಾಡಗಿ ನದಿಯ ಹತ್ತಿರದ ಬ್ಯಾರೇಜ್ ಬೇಸಿಗೆಯಿಂದ ಇಲ್ಲಿಯವರೆಗೆ ಸಂಪೂರ್ಣ ಬತ್ತಿಹೊಗಿದೆ. ಹೀಗಾಗಿ ಬೇಸಿಗೆಯಿಂದ ಮಳೆಗಾಲ ಬಂದರೂ ಪಟ್ಟಣದ ಜನರಿಗೆ ಟ್ಯಾಂಕರ್ ನೀರೆ ಗತಿಯಾಗಿದೆ. ಪಟ್ಟಣದ ಅಧಿದೇವತೆ ಭಾಲ್ಕೇಶ್ವರ ಮಂದಿರದ ಹತ್ತಿರದ ಝರಬಾವಿಯು ಕಳೆದ ಸಾಲಿನಲ್ಲಿ ಹೂಳೆತ್ತಿದ್ದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಆಸರೆಯಾಗಿದೆ. ಬೇಸಿಗೆ ಅವಧಿಯಂತೆ ಟ್ಯಾಂಕರ್ ಅಬ್ಬರ ಈಗ ಇಲ್ಲದಿದ್ದರೂ ಸಹ ಸಂಪೂರ್ಣವಾಗಿ ಟ್ಯಾಂಕರ್ ನೀರು ಸ್ಥಗಿತಗೊಂಡಿಲ್ಲ.
ಪಟ್ಟಣದ ಬೀದರ ಬೇಸ್ ಏರಿಯಾ, ಧನಗರ ಗಲ್ಲಿ, ಕೈಕಾಡಿ ಗಲ್ಲಿ, ಚೌಧರಿ ಗಲ್ಲಿ, ದುರ್ಗಾದೇವಿ ಏರಿಯಾ, ಧರ್ಮೇಶ್ವರ ಮಂದಿರ ಏರಿಯಾ, ವೀರಭದ್ರೇಶ್ವರ ಮಂದಿರ ಏರಿಯಾ, ಸರಾಯಿ ಗಲ್ಲಿ, ಉಪನ್ಯಾಸಕರ ಬಡಾವಣೆ, ಪೊಲೀಸ್ ವಸತಿಗೃಹ, ಭೀಮನಗರ, ಜ್ಯೋಶಿ ನಗರ, ವಾಲೆ ಗಲ್ಲಿ, ಅಗ್ನಿಶಾಮಕ ಠಾಣೆ ಏರಿಯಾ, ಹನುಮಾನ ಮಂದಿರ ಏರಿಯಾ, ಮುಲ್ಲಾಗಲ್ಲಿ, ಆದಿತ್ಯ ಕಾಲೋನಿ, ಭಾಲ್ಕಿ ತಾಂಡಾ, ಸಿದ್ಧಾರ್ಥನಗರ, ಹರೇಮಠ ಏರಿಯಾ, ಜನತಾ ಕಾಲೋನಿ, ಮಿನಕೇರೆ ಗಲ್ಲಿ, ಹೌಸಿಂಗ್ ಬೋರ್ಡ್ ಕಾಲೋನಿ, ಆರ್‌ಟಿಓ ಕಚೇರಿ ಏರಿಯಾ, ಸೋನಾರ ಗಲ್ಲಿ, ಮಾಶೆಟ್ಟೆ ಗಲ್ಲಿ, ದಾಡಗಿ ಬೇಸ್, ಬಸವ ನಗರ, ಅಶೋಕ ನಗರ, ಗೋಪಾಲ ಗಲ್ಲಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯದಲ್ಲಿ ಪ್ರತಿದಿನ ಎಲ್ಲಾ ಬಡಾವಣೆಗಳನ್ನು ಸೇರಿ ಸುಮಾರು 40ರಿಂದ 45 ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ.
ಕಳೆದ ಸಾಲಿನ ಜೂನ್ ತಿಂಗಳಲ್ಲಿ ಸಾಕಷ್ಟು ಮಳೆಯಾಗಿ ಹಳ್ಳ ಕೊಳ್ಳಗಳು ತುಂಬಿ, ನದಿಗೆ ನೀರು ಬಂದಿತ್ತು. ಆದರೆ ಈ ವರ್ಷ ಇನ್ನೂ ಬೇಸಿಗೆಯಾಗಿಯೇ ಇದೆ. ಹೀಗಾಗಿ ಪಟ್ಟಣದ ಕುಡಿಯುವ ನೀರಿನ ಮೂಲ ದಾಡಗಿ ಹತ್ತಿರದ ಕಾರಂಜಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಪಟ್ಟಣದಲ್ಲಿ ಇದುವರೆಗೂ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.