ಭಾಲ್ಕಿ: ಮಳೆಗಾಲ ಆರಂಭವಾದರೆ ಸಾಕು ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಚ್ಚಿ ಬೀಳುತ್ತಾರೆ. ನಿತ್ಯ ಮಳೆ ಬಂದರೆ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಇದು ನಾವದಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯಥೆ!
Advertisement
1975ನೇ ಸಾಲಿನಲ್ಲಿ ನಿರ್ಮಿಸಲಾದ ಈ ಶಾಲೆಯ ಕಟ್ಟಡ ಒಟ್ಟು ಐದು ಕೋಣೆಗಳನ್ನು ಹೊಂದಿದೆ. ಇಲ್ಲಿಯ ಎಲ್ಲಾ ಕೋಣೆಗಳ ಛಾವಣಿಯ ಸಿಮೆಂಟ್ ಪದರು ಕಳಚಿಬಿದ್ದು, ಕಬ್ಬಿಣದ ಸರಳುಗಳು ಹೊರ ಬಂದಿವೆ. ಗೋಡೆಗಳಲ್ಲಿ ಸಣ್ಣ ಬಿರುಕು ಬಿಟ್ಟು ಪ್ಲಾಸ್ಟರ್ ಕೂಡ ಹಾಳಾಗಿದೆ. ಮಳೆಗಾಲದಲ್ಲಿ ಎಲ್ಲ ತರಗತಿ ಕೋಣೆಗಳು ಸೋರುತ್ತವೆ. ಹಾಗಾಗಿ ಮಳೆ ಜೋರಾಗಿ ಬಂದರೆ ತರಗತಿಗಳಿಗೆ ಅನಿವಾರ್ಯವಾಗಿ ರಜೆ ಘೋಷಿಸಬೇಕಾಗುತ್ತದೆ.
Related Articles
Advertisement
ಪ್ರಾರಂಭದಲ್ಲಿ ಈ ಶಾಲೆಗೆ ಪಕ್ಕದ ಹಳ್ಳಿಗಳಾದ ಮಾವಿನ ಹಳ್ಳಿ, ಕಪಲಾಪೂರ, ಬಾಜೋಳಗಾ ಗ್ರಾಮದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಇಲ್ಲಿಯ ಪರಿಸ್ಥಿತಿ ಕಂಡು ಗ್ರಾಮದ ವಿದ್ಯಾರ್ಥಿಗಳೇ ಬೇರೆ ಗ್ರಾಮಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ ಸುಮಾರು 60 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕ ಸೇರಿ ಐದು ಜನ ಶಿಕ್ಷಕರಿದ್ದಾರೆ. ಶಾಲಾ ಕಟ್ಟಡ ಮತ್ತು ಅಲ್ಲಿಯ ಪರಿಸರ ಸುಂದರವಾದರೆ ಇನ್ನೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿ, ಹೆಚ್ಚಿನ ಶಿಕ್ಷಕರೂ ಬರುತ್ತಾರೆ. ಕಾರಣ ಯಾವುದೇ ಅನಾಹುತ ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕಟ್ಟಡ ನವೀಕರಣ ಮಾಡಬೇಕಿದೆ.
ಪ್ರಾಥಮಿಕ ಶಾಲೆ ಕಟ್ಟಡ ನವೀಕರಣಕ್ಕಾಗಿ ಸಾಕಷ್ಟು ಸಲ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.•ಸಿದ್ದಲಿಂಗ ಸ್ವಾಮಿ, ಗ್ರಾಮಸ್ಥರು ಮಳೆಗಾಲ ಬಂತೆಂದರೆ ಶಾಲೆಯಲ್ಲಿ ಕುಳಿತು ಕೆಲಸ ಮಾಡಲು ಭಯವಾಗುತ್ತಿದೆ. ಏನು ಮಾಡುವುದು. ಸರ್ಕಾರಿ ಕೆಲಸ, ಎಲ್ಲಿಯಾದರೂ ಕುಳಿತು ಕೆಲಸ ಮಾಡಬೇಕಾಗಿದೆ.
•ಹೆಸರು ಹೇಳಲಿಚ್ಛಿಸದ ಶಿಕ್ಷಕರು