ಭಾಲ್ಕಿ: ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಗಳಿಗೆ ಸಿಲುಕಿ ನಲುಗಿರುವ ಈ ಭಾಗದ ರೈತರು ಈ ವರ್ಷ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಕಳೆದ ಸಾಲಿನಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಮುಂಗಾರು ಫಸಲು ನಿರೀಕ್ಷೆಯಂತೆ ಬರದೇ ರೈತರು
ಒಂದಿಷ್ಟು ನಷ್ಟ ಅನುಭವಿಸಿದ್ದರು. ಈ ನಷ್ಟದ ನಡುವೆಯೂ ಈ ಬಾರಿ ಮುಂಗಾರು ಬಿತ್ತನೆಗೆ ಉತ್ಸುಕರಾಗಿರುವ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೇಡಿಕೆಯಂತೆ ಬೀಜ, ರಸಗೊಬ್ಬರ ಸಂಗ್ರಹವಾಗುತ್ತಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. 25 ಸಾವಿರ ಕ್ವಿಂಟಲ್ ಸೋಯಾಬಿನ್ ಬೀಜಕ್ಕೆ ಬೇಡಿಕೆಯಿದ್ದು, ಈಗಾಗಲೇ 19 ಸಾವಿರ ಕ್ವಿಂಟಲ್‌ನ ಇಂಡೆಂಟ್ ಬಂದಿದೆ. ಅದರಲ್ಲಿ 5.5 ಕ್ವಿಂಟಲ್ ಸೋಯಾಬಿನ್ ಬೀಜ ಸಂಗ್ರಹವಾಗಿದ್ದು, ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ತಲಾ ಒಂದು ಸಾವಿರ ಕ್ವಿಂಟಲ್‌ನಂತೆ ಸೋಯಾಬಿನ್ ಬೀಜ ಕಳುಹಿಸಲಾಗಿದೆ. ಹೆಸರು, ಉದ್ದು ಬೀಜ ಶೀಘ್ರವೇ ಆಯಾ ರೈತ ಸಂಪರ್ಕ ಕೇಂದ್ರಕ್ಕೆ ಬರಲಿವೆ. 10 ಸಾವಿರ ಮಟ್ರಿಕ್ ಟನ್ ರಸಗೊಬ್ಬರದ ಅಗತ್ಯವಿದ್ದು, ಈಗಾಗಲೇ ಸುಮಾರು 6 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಖಲಾಗಿದೆ.
ನಿರೀಕ್ಷೆಯಿಂತೆ ಜೂನ್ 5ರ ನಂತರ ಮುಂಗಾರು ಹಂಗಾಮು ಆರಂಭವಾಗುವ ಲಕ್ಷಣವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸತೀಶ ಮುದ್ದಾ ತಿಳಿಸಿದ್ದಾರೆ.