ಭಾಲ್ಕಿ: ಒಂದು ಭಾಗದ ಸರ್ವತೋಮುಖ ಏಳ್ಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನುವ ವಾಸ್ತವ ಅರ್ಥ ಮಾಡಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಬಾಬುರಾವ್ ಪಾಟೀಲ ಶಿಂಧೆ ಹೊನ್ನಳ್ಳಿಕರ ಅವರು ಕಿಸಾನ ಶಿಕ್ಷಣ ಪ್ರಸಾರಕ ಮಂಡಳ ಸ್ಥಾಪಿಸಿ ಈ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ, ಕೆಎಸ್‌ಪಿ ಮಂಡಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಶಿವಾಜಿ ಮಹಾವಿದ್ಯಾಲಯದಲ್ಲಿ ನಡೆದ ದಿ.ಬಾಬಾರಾವ್ ಪಾಟೀಲ ಹೊನ್ನಳ್ಳಿಕರ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ದೀನ, ದುರ್ಬಲರ, ಕೂಲಿ ಕಾರ್ಮಿಕ ಬಡ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು ಎನ್ನುವ ಸದುದ್ದೇಶದಿಂದ ಪಾಟೀಲರು ಸುಮಾರು ನಾಲ್ಕು ದಶಕಗಳ ಹಿಂದೇಯೇ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಈ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಸಾವಿರಾರು ಜನರು ತಮ್ಮ ಜೀವನದಲ್ಲಿ ಉನ್ನತ ಹುದ್ದೆ ಅಲಂಕರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಪತ್ರಕರ್ತ ಸ.ದಾ.ಜೋಶಿ ವ್ಯಕ್ತಿತ್ವ ವಿಕಸನ ವಿಷಯ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸಾಧನೆ ಮಾಡಸಬೇಕಾದರೆ ಏಕಾಗ್ರತೆ, ದೃಢ ಸಂಕಲ್ಪ, ದೃಢ ವಿಶ್ವಾಸ ಮತ್ತು ಉನ್ನತ ಗುರಿ ಹೊಂದಿದವರಾಗಿರಬೇಕು. ಕೀಳರಿಮೆ ಭಾವದಿಂದ ಹೊರಬರಬೇಕು ಎಂದು ಸಲಹೆ ನೀಡಿದರು. ಬಳಿಕ ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಸಂಸ್ಥೆಯ ಖಜಾಂಚಿ ಅಶೋಕರಾವ್ ಸೂರ್ಯವಂಶಿ ಮಾತನಾಡಿ, ದಿ.ಬಾಬಾರಾವ್ ಪಾಟೀಲ ಅವರ ಜೀವನ ಮತ್ತು ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕು. ಗತ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಗುರುತರ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಹೇಳಿದರು.
ಪಿ.ಎಸ್.ಬಿರಾದಾರ, ಶಂಭುಲಿಂಗ ಕಾಮಣ್ಣ ಮಾತನಾಡಿದರು. ಚಂದ್ರಶೇಖರ ಎಮ್ಮೆ, ಕೃಷ್ಣಕಾಂತ ಪಾಟೀಲ, ಅನಂತ ಪಾಟೀಲ, ಪ್ರತಾಪರಾವ ಪಾಟೀಲ, ಶಾಮರಾವ್ ಕಾದೇಪೂರೆ, ತುಕಾರಾಮ ಮೋರೆ ಇದ್ದರು. ಕಾರ್ಯಕ್ರಮ ನಿಮಿತ್ತ ಆಯೋಜಿಸಿದ್ದ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಾ| ಚಂದ್ರಕಾಂತ ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಾಲಾಜಿ ತಾಡಮಲೆ ನಿರೂಪಿಸಿದರು. ಓಂಕಾರ ಕಾಕನಾಳೆ ವಂದಿಸಿದರು.