ಭಾಲ್ಕಿ: ಮನುಷ್ಯ ವಿಶಾಲ ದೃಷ್ಟಿಕೋನ ಹೊಂದಿರುವುದು ಅತ್ಯಗತ್ಯವಾಗಿದೆ ಎಂದು ಬೀದರಿನ ಕೆಎಲ್ಇ ಸಂಸ್ಥೆಯ ಅಧ್ಯಕ್ಷೆ ಮೋಜಾಬಾಯಿ ಕಲವಾಡಿಕರ ಹೇಳಿದರು.
ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ರವಿವಾರ ನಡೆದ ಕೆಎಲ್ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸಪ್ಪಾ ಕಲವಾಡಿಕರ್ ಅವರ 7ನೇ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಜೀವನದಲ್ಲಿ ಛಲದಿಂದ ಪ್ರಯತ್ನ ಪಟ್ಟರೆ ಪ್ರತಿಯೊಂದನ್ನು ಸಾಧಿಸಲು ಸಾಧ್ಯ. ಇದಕ್ಕೆ ವಿಶಾಲ ದೃಷ್ಟಿಕೋನ ಬೇಕಾಗಿದೆ. ಯಾವುದನ್ನು ಮಾಡುವುದಿದ್ದರೂ ಉತ್ತಮ ಮನಸ್ಸಿನಿಂದ ಮಾಡಬೇಕು. ಅಂತಹ ವ್ಯಕ್ತಿತ್ವಕ್ಕೆ ಬಸಪ್ಪ ಕಲವಾಡಿಕರ್ ಮಾದರಿಯಾಗಿದ್ದರು ಎಂದು ಹೇಳಿದರು.
ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಛಲದಿಂದ ಪ್ರಯತ್ನಶೀಲರಾದಲ್ಲಿ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ಬಸಪ್ಪಾ ಕಲವಾಡಿಕರ್ ಅವರನ್ನು ಸ್ಮರಿಸಬೇಕಾಗಿದೆ. ಕಲವಾಡಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಅವರು ಕೆಲವೇ ವರ್ಷಗಳಲ್ಲಿ ಇಂತಹ ಬೃಹತ್ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದು ಸಾಮಾನ್ಯ ಮಾತಲ್ಲ. ನಾನು ಬಡವ ನನ್ನಿಂದ ಏನು ಸಾಧ್ಯ? ಎಂದು ಕೈ ಚಲ್ಲಿ ನಿಂತರೆ ಜಿಲ್ಲೆಯಲ್ಲಿ ಇಂತಹ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯವಾಗುತ್ತಿದ್ದಿಲ್ಲ. ಕೆಎಲ್ಇ ಸಂಸ್ಥೆಯಡಿ ಹತ್ತಾರು ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಹಿಂದಿ ಬಿ.ಇಡಿ ತರಬೇತಿ ಕೇಂದ್ರ, ಮರಾಠಿ ಡಿ.ಇಡಿ ಕಾಲೇಜು ಹಾಗೂ ಹಲವಾರು ಶಾಲಾ ಕಾಲೇಜುಗಳನ್ನು ತೆರೆದು ನೂರಾರು ವಿದ್ಯಾವಂತರಿಗೆ ಕೆಲಸ ಕೊಟ್ಟ ಮಹನೀಯರು ಅವರಾಗಿದ್ದರು. ಅವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಮನೋಹರ ಮೇತ್ರೆ ವಿಶೇಷ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕಾಗಿದೆ. ಬಸಪ್ಪಾ ಕಲವಾಡಿಕರ್ ಅವರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಪ್ರಯತ್ನಶೀಲರಾಗಿ ಮುಂದುವರಿಯಬೇಕು ಎಂದು ಹೇಳಿದರು.
ಶಿಕ್ಷಕಿ ಶೋಭಾ ಮಾಸಿಮಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರಾಂತಿ ಕಲವಾಡಿಕರ, ಡಿ.ಎಂ.ಗಾಯಕವಾಡ, ಸುಭಾಷ ಜಲ್ದೆ, ಯುವರಾಜ ಪಾಟೀಲ, ಪ್ರವೀಣ ಸಿಂಧೆ, ಶಿವಕುಮಾರ ವಾಡಿಕರ, ಉಪಸ್ಥಿತರಿದ್ದರು. ಶಿವಶರಣಪ್ಪ ಸೊನಾಳೆ ಸ್ವಾಗತಿಸಿದರು. ಜೊಳದಪಕೆ ವಂದಿಸಿದರು.