Advertisement

ದುಶ್ಚಟ ಬಿಟ್ಟು ದೇಶದ ಪ್ರಗತಿಗೆ ಕೈಜೋಡಿಸಿ

04:19 PM Mar 01, 2020 | |

ಭಾಲ್ಕಿ: ದೇಶದ ಭವಿಷ್ಯವಾಗಿರುವ ಯುವಶಕ್ತಿ ದುಶ್ಚಟ, ದುರ್ಗುಣಗಳಿಗೆ ಬಲಿಯಾಗದೇ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ ಬೀದರ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಸಹಯೋಗದಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕಾ, ಫ್ರಾನ್ಸ್‌ ಸೇರಿದಂತೆ ಮುಂತಾದ ರಾಷ್ಟ್ರಗಳಲ್ಲಿ ನಮ್ಮ ದೇಶದ ಯುವಕರು ವೈದ್ಯ, ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಹಾಗಾಗಿ ಜಗತ್ತು ಭಾರತದ ಕಡೆ ನೋಡುತ್ತಿದೆ ಎಂದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ರೋಹಿಣಿ.ಕೆ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ವ್ಯಸನದ ವಿರುದ್ಧ ಸಮರ ಸಾರಿದ್ದಾರೆ. ಮದ್ಯ ಸೇರಿದಂತೆ ಇತರೆ ವ್ಯಸನದ ವಸ್ತು ನಿಷೇಧಿಸಲು ಆಗುವುದಿಲ್ಲ. ಬದಲಾಗಿ ಯುವಶಕ್ತಿ ದುಶ್ಚಟಗಳಿಂದ ದೂರ ಉಳಿದು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಮಾತನಾಡಿ, ಹುಟ್ಟು-ಸಾವು ನಮ್ಮ ಕೈಯಲ್ಲಿಲ್ಲ ಆದರೆ, ಬದುಕುವ ರೀತಿ ನಮ್ಮ ಕೈಯಲ್ಲಿದೆ. ಹಾಗಾಗಿ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಬಾರದು ಎಂದರು. ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಬಾರಿ ವ್ಯಸನದ ದಾಸರಾದರೆ ಅದರಿಂದ ಹೊರಬರುವುದು ಕಷ್ಟದ ಕೆಲಸ. ಶರೀರ, ಹೃದಯ ದೇವರ ಅರಮನೆಯಿದ್ದಂತೆ. ಅದನ್ನು ಯಾವಾಗಲು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಯುವಶಕ್ತಿಯಲ್ಲಿ ನೈತಿಕತೆ, ಧರ್ಮ, ಆಧ್ಯಾತ್ಮಿಕತೆ ಮಹತ್ವ ಸಾರಬೇಕಾಗಿದೆ ಎಂದು ಹೇಳಿದರು.

Advertisement

ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ವ್ಯಕ್ತಿಯ ಜೀವ ಹಾಗೂ ಜೀವನ ಅತ್ಯಂತ ಅಮೂಲ್ಯವಾಗಿದೆ. ಹಾಗಾಗಿ ದೇಶದ ಭವಿಷ್ಯವಾಗಿರುವ ಯುವಶಕ್ತಿ ಉತ್ಸಾಹ, ಜೀವನ ಹಾಳಾಗಬಾರದೆನ್ನುವ ಉದ್ದೇಶದೊಂದಿಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಿಮಾನ್ಸ್‌ ಮನೋರೋಗ ತಜ್ಞ ಡಾ| ಸಿ.ಆರ್‌.ಚಂದ್ರಶೇಖರ, ಪೊಲೀಸ್‌ ಇಲಾಖೆ ಎಸಿಪಿ ನಾರಾಯಣಸ್ವಾಮಿ.ಕೆ.ಎನ್‌ ವಿಶೇಷ ಉಪನ್ಯಾಸ ನೀಡಿದರು. ಮಹಾಲಿಂಗ ಸ್ವಾಮೀಜಿ, ಜಯದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಹೀರಾಚಂದ, ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಧಿಕಾರಿ ಮಹಾಂತೇಶ.ಎಸ್‌, ಸೋಮನಾಥಪ್ಪ ಅಷ್ಟೂರೆ, ಶಿವಾನಂದ ಗುಂದಗೆ, ಸಿಕ್ರೇಶ್ವರ ಶೆಟಕಾರ್‌, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಆಡಳಿತಾ ಧಿಕಾರಿ ಮೋಹನ ರೆಡ್ಡಿ ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು. ಕಲಾವಿದ ನವಲಿಂಗ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next