ಭಾಲ್ಕಿ: ಬೇಸಿಗೆ ಪ್ರಾರಂಭವಾಗಿ ಬರೀ ಎರಡು ತಿಂಗಳು ಗತಿಸಿದೆ. ಆದರೆ ಯಾವುದೇ ಮಳೆ ಬಿದ್ದಿಲ್ಲವಾದ್ದರಿಂದ ದಿನದಿಂದ ದಿನಕ್ಕೆ ಬಿಸಿಲಿನ ತಾಪ ನೆತ್ತಿ ಸುಡುತ್ತಿದೆ. ಇದರಿಂದ ಬಿಸಿಲಿನ ಝಳಕ್ಕೆ ಹೈರಾಣಾದ ಜನತೆ ತಂಪಾದ ನೀರು, ಪಾನೀಯ ಸೇರಿದಂತೆ ಕಬ್ಬಿನ ಹಾಲಿಗೆ ಆಶ್ರಯಿಸಿದ್ದರಿಂದ ಬೇಡಿಕೆ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ಹೋದ ವರ್ಷ ಏಪ್ರಿಲ್ ಮೊದಲ ವಾರದಲ್ಲಿ 35 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಆದರೆ ಈಗ 40 ರಿಂದ 42 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಕೊರತೆಯಾದ ಕಬ್ಬು: ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ತಾಲೂಕಿನಾದ್ಯಂತ ಕಬ್ಬಿನ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಕಬ್ಬು ದೊರೆಯದಂತಾಗಿದೆ. ಕಳೆದ ಬಾರಿ 300 ರೂ. ಗೆ ಕ್ವಿಂಟಲ್ ಕಬ್ಬು ಸಿಗುತ್ತಿತ್ತು. ಆದರೆ ಈ ವರ್ಷ 600 ರೂ. ಕೊಟ್ಟರೂ ಕಬ್ಬು ಸಿಗುತ್ತಿಲ್ಲ. ಪಕ್ಕದ ಮಹಾರಾಷ್ಟ್ರ, ತೆಲಂಗಾಣದಿಂದ ಕಬ್ಬು ತಂದು ವ್ಯಾಪಾರ ಮಾಡುವ ಅನಿವಾರ್ಯತೆ ಬಂದೊದಗಿದೆ. ಆದರೆ ಇದರಲ್ಲಿ ಲಾಭಕ್ಕಿಂತಲೂ ವೆಚ್ಚವೇ ಹೆಚ್ಚಾಗುತ್ತಲಿದೆ ಎನ್ನುತ್ತಾರೆ ರಾಜಸ್ತಾನಿ ಕಬ್ಬಿನ ಹಾಲಿನ ವ್ಯಾಪಾರಿ ಶರ್ಮಾ.
ಪಟ್ಟಣಕ್ಕೆ ಆಗಮಿಸುವ ತಾಲೂಕಿನ ಮುಖ್ಯ ರಸ್ತೆಗಳ ಮೇಲೆ ಕಬ್ಬಿನ ಹಾಲಿನ ಮಳಿಗೆ ಹಾಕಲಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಮುಖ್ಯ ರಸ್ತೆ ಮೇಲಿನ ಹೊಲದ ಮಾಲೀಕರು ತಮ್ಮ ಸ್ವಂತ ಹೊಲದಲ್ಲಿ ಕಬ್ಬಿನ ಹಾಲಿಗಾಗಿಯೇ ಸ್ವಲ್ಪ ಕಬ್ಬು ಬೆಳೆದು ತಾಜಾ, ತಾಜಾ ಕಬ್ಬಿನ ರಸ ಹಿಂಡಿ ಕೊಡುತ್ತಿದ್ದಾರೆ. ಹೀಗಾಗಿ ಜನ ಕಬ್ಬಿನ ರಸ ಕುಡಿಯಲು ಪಟ್ಟಣದ ಹೊರವಲಯದ ಕಬ್ಬಿನ ಹಾಲಿನ ಅಂಗಡಿಗಳಿಗೆ ತೆರಳುತ್ತಿರುವುದು ಸಾಮಾನ್ಯವಾಗಿದೆ.
ಮಧ್ಯಾಹ್ನ ವ್ಯಾಪಾರ ಕಡಿಮೆ: ಇನ್ನು ಪಟ್ಟಣದಲ್ಲಿ ನಾಲ್ಕಾರು ರಾಜಸ್ತಾನಿ ಮೊಬೈಲ್ ಕಬ್ಬಿನ ಹಾಲಿನ ವಾಹನಗಳು, 10 ಕಬ್ಬಿನ ಜ್ಯೂಸ್ ಅಂಗಡಿಗಳು, 20 ನಿಂಬೆ ರಸ್ ಮತ್ತು ಲಸ್ಸಿ ಕೇಂದ್ರಗಳು, 6 ತಂಪು ಪಾನೀಯ ಕೇಂದ್ರ ಸೇರಿದಂತೆ ಹಲವಾರು ಅಂಗಡಿ ತೆರೆಯಲಾಗಿದೆ. ಈ ಅಂಗಡಿಗಳಲ್ಲಿ ಮಧ್ಯಾಹ್ನ ಬಿಸಿಲಿನಲ್ಲಿ ಸ್ವಲ್ಪ ವ್ಯಾಪಾರ ಕಡಿಮೆಯಾದರೂ, ಸಂಜೆ ವೇಳೆಗೆ ಜೋರಾಗಿರುತ್ತದೆ. ಬಿಸಿಲಿನ ಬವಣೆಯಿಂದ ಪಾರಾಗಲು ಜನ ತಂಪು ಪಾನೀಯ ಸೇವಿಸುತ್ತಿದ್ದಾರೆ ಎಂದು ಪಟ್ಟಣದ ನಿವಾಸಿ ರಾಜೇಶ ಮುಗಟೆ ಹೇಳುತ್ತಾರೆ.
ಒಟ್ಟಿನಲ್ಲಿ ನೆತ್ತಿ ಸುಡುತ್ತಿರುವ ಬಿಸಿಲಿನ ಧಗೆ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯ, ಕಬ್ಬಿನ ಹಾಲಿನ ಮಳಿಗೆಗಳತ್ತ ವಾಲುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.
ಕಳೆದ ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದೆ. ಜನ ಆರೋಗ್ಯದ ಕಡೆ ಗಮನ ಕೊಡಬೇಕು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹೊರಗಡೆ ಓಡಾಡುವುದು ಕಡಿಮೆ ಮಾಡಬೇಕು. ಮನೆಗೆ ಬಂದ ಕೂಡಲೇ ಸರಾಗವಾಗಿ ನೀರು ಕುಡಿಯಬಾರದು. ಅತಿಯಾದ ಊಟ ಮಾಡಬಾರದು.
•ಡಾ| ಶರಣಯ್ನಾ ಸ್ವಾಮಿ,
ತಾಲೂಕು ಆರೋಗ್ಯ ಅಧಿಕಾರಿ
ಸೋಡಾ, ಐಸ್ ಕ್ರೀಮ್, ಕಾರ್ಬೋನೇಟೆಡ್ ತಂಪು ಪಾನೀಯ, ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು. ಬಿಸಿಲಿನ ತಾಪದಲ್ಲಿ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರ ಇರಬೇಕು. ನಿಶ್ಯಕ್ತಿ, ವಾಂತಿಯಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
•ಡಾ| ಪ್ರವೀಣ,
ಡಾವರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಜಯರಾಜ ದಾಬಶೆಟ್ಟಿ