Advertisement

ಗುರು ಸ್ಮರಣೆಯಿಂದ ಬದುಕು ಸಾರ್ಥಕ

02:55 PM Jul 22, 2019 | Naveen |

ಭಾಲ್ಕಿ: ಗುರು ಎಂದರೆ ಜ್ಞಾನದ ಆಗರ. ಗುರುವಿನ ಸ್ಮರಣೆಯಲ್ಲಿ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸಹ ಸೇವಾ ಪ್ರಮುಖ, ಹಗರಿಬೊಮ್ಮನ ಹಳ್ಳಿಯ ದುರ್ಗಣ್ಣ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ರವಿವಾರ ಆಷಾಢ ಕೃಷ್ಣ ಚತುರ್ಥಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ್‌ ಪ್ರವಚನ ನೀಡಿದರು.

ನಮ್ಮ ದೇಶದ ಋಷಿಮುನಿಗಳ ಪರಂಪರೆ ಅಗಾಧವಾಗಿದೆ. ಅವರು ಜಗತ್ತಿಗೆ ಸಾಕಷ್ಟು ಜ್ಞಾನ ನೀಡಿದ್ದಾರೆ. ಆದರೆ ಅವರು ಯಾರೂ ತಮ್ಮ ಹೆಸರು ಹೇಳಿಕೊಂಡಿಲ್ಲ, ಆದರೆ ಜಗತ್ತಿನ ಅನೇಕ ದಾರ್ಶನಿಕರು ತಾವು ತಿಳಿಸಿದ ಜ್ಞಾನಕ್ಕೆ ತಮ್ಮ ಹೆಸರು ಕೊಟ್ಟಿದ್ದಾರೆ. ಮಾರ್ಕೋನಿಗಿಂತಲೂ ಮೊದಲೇ ರೇಡಿಯೋ ತರಂಗಳ ಬಗ್ಗೆ ಮಾಹಿತಿ ನೀಡಿದ್ದು ನಮ್ಮವರೇ ಆದ ವಿಜ್ಞಾನಿ ಸರ್‌ ಜಗದೀಶ ಚಂದ್ರ ಭೋಷ್‌. ಆದರೆ ಅವರು ಅದಕ್ಕೆ ತಮ್ಮ ಹೆಸರು ಕೊಟ್ಟಿಲ್ಲ. ಇಂತಹ ಮಹಾನ್‌ ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರ ಪರಂಪರೆಯೇ ನಮ್ಮ ಭಾರತ. ಇಂತಹ ಜ್ಞಾನಿಗಳ ನಾಡಿನಲ್ಲಿ ಜನಸಿದ ನಾವೇ ಧನ್ಯರು ಎಂದರು.

ನಮಗೆ ಹುಟ್ಟು ಗೊತ್ತಿಲ್ಲ, ಆದರೆ ಸಾವು ನಿಶ್ಚಿತ. ಜೀವನ ಸಾರ್ಥಕತೆ ಮಾಡಿಕೊಳ್ಳುವುದೇ ಬದುಕು. ಗುರುವಿಲ್ಲದೇ ಯಾರ ಜೀವನವೂ ಪರಿಪೂರ್ಣವಲ್ಲ. ಗುರುವಿಗೆ ಪ್ರಾಧಾನ್ಯತೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ನಮ್ಮಿಂದ ಸಮಾಜಕ್ಕೇನಾದರೂ ಪುಣ್ಯದ ಕೆಲಸ ಮಾಡುವುದೇ ಸಾರ್ಥಕ ಜೀವನ. ಈ ಜೀವನದ ಅಂತಿಮ ಲಕ್ಷ ಮುಟ್ಟಿಸುವಾತನೆ ಗುರು. ಅದಕ್ಕಾಗಿ ಗುರುವಿಗೆ ಶರಣು ಹೋದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಕ್ಕಳ ತಜ್ಞ ಡಾ|ಯುವರಾಜ ಜಾಧವ, ಆತ್ಮ ಪರಮಾತ್ಮನನ್ನು ಸೇರುವ ಮಾರ್ಗ ತಿಳಿಸುವಾತನೇ ಗುರು. ಹೀಗಾಗಿ ನಮ್ಮ ಅಂತಿಮ ಲಕ್ಷ ಮುಟ್ಟಲು ಗುರುವಿಗೆ ಶರಣು ಹೋಗಬೇಕು ಎಂದು ಹೇಳಿದರು.

Advertisement

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಪ್ರಮುಖ ಡಿ.ಕೆ.ಸಿದ್ರಾಮ, ಸುರೇಶ ಬಿರಾದಾರ, ಶಿವರಾಜ ಗಂದಗೆ, ಸೂರಜಸಿಂಗ್‌ ರಜಪೂತ, ಧನರಾಜ ನೀಲಂಗೆ, ಪ್ರಕಾಶ ಮಾಶೆಟ್ಟೆ ಮತ್ತಿತರರು ಇದ್ದರು. ಪ್ರಾರಂಭದಲ್ಲಿ ಧ್ವಜ ವಂದನ ಕಾರ್ಯಕ್ರಮ ನಡೆಯಿತು. ಭಗವಾ ಧ್ವಜಕ್ಕೆ ಎಲ್ಲರೂ ವಂದನೆ ಸಲ್ಲಿಸಿದರು. ಶಿವಕುಮಾರ ಕಂಜೋಳಗೆ ಸ್ವಾಗತಿಸಿದರು. ಶಿವಲಿಂಗ ಕುಂಬಾರ ನಿರೂಪಿಸಿದರು. ಈಶ್ವರ ರುಮ್ಮಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next