ಭಾಲ್ಕಿ: ಕಾಲ, ಕಾಲಕ್ಕೆ ಮಳೆಯಾಗದೇ ಸುನಾಮಿ, ಭೂಕಂಪ ಮುಂತಾದ ಪ್ರಕೃತಿ ವಿಕೋಪ ತಡೆಯಲು ನಮ್ಮಲ್ಲಿ ಪರಿಸರ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ದೇವರು ಪ್ರತಿಪಾದಿಸಿದರು.
ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಹುಗ್ಗೆಳ್ಳಿ ಹಿರೇಮಠದಲ್ಲಿ ನಡೆದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಇಂದಿನ ದಿನಮಾನ ಪಕೃತಿ ವಿಕೋಪದತ್ತ ಸಾಗುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದೆ ನಾವೆಲ್ಲರೂ ಹನಿ ನೀರಿಗಾಗಿ ಪರದಾಡುತ್ತಿದ್ದೇವೆ. ಹೀಗಾಗಿ ನಾವೆಲ್ಲರೂ ಪರಿಸರದ ಬಗ್ಗೆ ಜಾಗೃತರಾಗಿ ಪರಿಸರ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ತಾಪಂ ಸದಸ್ಯ ವಿಜಯಕುಮಾರ ಕಡಗಂಚಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಸದಸ್ಯ ರವಿ ರೆಡ್ಡಿ, ಭಾರತ ದೇಶದಲ್ಲಿ ಒಟ್ಟು 138 ಕೋಟಿ ಜನಸಂಖ್ಯೆ ಇದೆ. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ಸಾಕು ಅದು ಸಮಾಜಕ್ಕೆ ನಾವು ಕೊಡುವ ದೊಡ್ಡ ಕೊಡುಗೆಯಾಗುತ್ತದೆ. ದಿನೇದಿನೇ ಹೆಚ್ಚುತ್ತಿರುವ ಕಾರ್ಖಾನೆಗಳು ರಸ್ತೆ ಅಗಲೀಕರಣ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಶಂಕ್ರಯ್ಯ ಹಿರೇಮಠ, ಪರಿಸರ ಸ್ವಚ್ಛತೆ ಮತ್ತು ಮಳೆ ನೀರಿನ ಕೊಯ್ಲು ಈಗ ಅತ್ಯಗತ್ಯವಾಗಿದೆ. ಕಾರಣ ನಮ್ಮ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಹೀಗಾಗಿ ನಾವೆಲ್ಲರೂ ನೀರಿನ ಮಿತವ್ಯಯದೊಂದಿಗೆ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಶ್ರೀ ರುದ್ರಮುನಿ ದೇವರು, ಎಬಿವಿಪಿ ರಾಜ್ಯಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ ಮಾತನಾಡಿದರು.
ರಾಜಕುಮಾರ ಚಿಲಶೆಟ್ಟಿ, ಗುರನಾಥ ಭೂರ್ಕೆ, ಬಂಡೆಪ್ಪ ಮೋಳಕೆರೆ, ಓಂಕಾರ ಹಡಪದ, ಶಿವು ದಿಂಡೆ, ದಶವಂತ ಡಾವರಗೆ, ಪ್ರದೀಪ ಉಂಬರಗೆ, ಅನಂದ ರಟಕಲೆ, ರಾಜು ಹಂಡಗೆ, ಗುಂಡು ಸ್ವಾಮಿ, ಸಂಗಮೇಶ ಜ್ಯಾಶೆಟ್ಟೆ, ವಿಜಯ ಕಂಚಕೆ, ರಮೇಶ ಹೊನ್ನಾಳೆ, ಮೋಹನರಡ್ಡಿ ಇದ್ದರು.
ಆನಂದ ರಟಕಲೆ ಸ್ವಾಗತಿಸಿದರು. ಚನ್ನಯ್ಯ ಹುಗ್ಗೆಳ್ಳಿಮಠ ನಿರೂಪಿಸಿದರು. ಚನ್ನಾರೆಡ್ಡಿ ವಂದಿಸಿದರು.