Advertisement

ನೀರಿನ ಸಮಸ್ಯೆ ನಿವಾರಣೆಗೆ ಆದೇಶ

10:27 AM Jun 05, 2019 | Naveen |

ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು 23 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ಮೂಲಕ ಪರಿಹಾರ ಕಂಡುಕೊಳ್ಳಲು ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಸಾಕಷ್ಟು ಹಣ ವ್ಯಯ ಮಾಡುತ್ತಲಿದೆ. ಕೊಳವೆ ಬಾವಿ ಕೊರೆಸುವುದು, ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡುವುದು ಹೀಗೆ ಹತ್ತು ಹಲವಾರು ರೀತಿಯಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ, ಕಾರಂಜಾ ಜಲಾಶಯದಿಂದ ಭಾಲ್ಕಿ ಪಟ್ಟಣದ ವರಗೆ ಪೈಪ್‌ಲೈನ್‌ ಅಳವಡಿಸಿ ನೇರವಾಗಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಆಗುವಂತೆ 140 ಕೋಟಿ ರೂ. ಹಣ ಮಂಜೂರು ಮಾಡಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ತಾಲೂಕಿನ ಸುಮಾರು 23 ಗ್ರಾಮಗಳು ಮತ್ತು ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಅಲ್ಲದೇ ಮಾರ್ಗ ಮಧ್ಯದ 23 ಗ್ರಾಮಗಳಲ್ಲದೇ ಪಟ್ಟಣದ ಹೊರ ವಲಯದ ಕೆಲವು ಗ್ರಾಮಗಳಿಗೆ ಪಟ್ಟಣದಿಂದ ನೀರು ಒದಗಿಸುವ ಬಗ್ಗೆ ಮಾಹಿತಿ ಪಡೆದರು.

ಕೃಷಿ ಅಧಿಕಾರಿಗಳಿಂದ ರೈತರ ಆತ್ಮೆ ಹತ್ಯೆ ಪ್ರಕರಣ, ಬೆಳೆಹಾನಿ ಪರಿಹಾರ, ಬೆಳೆ ವಿಮೆ ಹಣ ವಿಲೇವಾರಿ ಸೇರಿದಂತೆ ರೈತರಿಗೆ ಸರ್ಕಾರದಿಂದ ಸೇರಬೇಕಾದ ಹಣದ ಬಗ್ಗೆ ಮಾಹಿತಿ ಪಡೆದರು. ಇದರಲ್ಲಿ ಬೆಳೆವಿಮೆ ರೈತರಿಗೆ ಇನ್ನೂ ಜಮೆ ಆಗದಿರುವ ಬಗ್ಗೆ ಬೇಸರ ವ್ಯಕ್ತ ಪಡೆಸಿದರು. ಕಂದಾಯ ಮತ್ತು ಕೃಷಿ ಅಧಿಕಾರಿಗಳು ರೈತರ ಸಾಲಮನ್ನಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಯಾವ ರೈತರಿಗೂ ಅನ್ಯಾಯವಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಯಲ್ಲಿ ಉತ್ತಮ ಮರ ನೆಡುವುದು ಮತ್ತು ನೈಜ ಫಲಾನುಭವಿಗಳಿಗೆ ಸಾಗವಾನಿ ಮರ ನೆಡುವ ಬಗ್ಗೆ ಮಾಹಿತಿ ನೀಡಿದರು. ಲೋಕೊಪಯೋಗಿ ಇಲಾಖೆ, ಪುರಸಭೆ ಮತ್ತು ಅರಣ್ಯ ಇಲಾಖೆಯವರು ಸೇರಿ ಪಟ್ಟಣದ ಮುಖ್ಯ ರಸ್ತೆಗಳ ಹತ್ತಿರ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಮರಗಳನ್ನು ನೆಡಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಸ್ತ್ರೀ ರೋಗ ತಜ್ಞೆ ಮತ್ತು ಅರವಳಿಕೆ ತಜ್ಞರಿಲ್ಲದ ಕಾರಣ ಸಿಜರಿಂಗ್‌ ಹೆರಿಗೆ ನಡೆಸಲಾಗುತ್ತಿಲ್ಲ. ಇಂತಹ ರೋಗಿಗಳನ್ನು ಬೇರೆ ಕಡೆಗೆ ಕಳುಹಿಸಲಾಗುತ್ತಿದೆ. ತಾಲೂಕಿನಲ್ಲಿಯ ಸುಮಾರು 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಅಕ್ಷರ ದಾಸೋಹ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪೂರ್ಣ ಮಾಹಿತಿ ನೀಡಿದರು.

ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪಶುಸಂಗೋಪನಾ ಇಲಾಖೆ, ಪಂಚಾಯತರಾಜ ಇಂಜಿನಿಯರಿಂಗ್‌ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೈಗಾರಿಕೆ ಇಲಾಖೆ, ಆಹಾರ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಆಯಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಉಪಾಧ್ಯಕ್ಷ ಮಾರುತಿ ಮಗರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next