Advertisement

ಸಮಾಜ ಅರಿಯಲು ಅಧ್ಯಾತ್ಮ ಜ್ಞಾನ ಅವಶ್ಯ

02:38 PM Apr 22, 2019 | Naveen |

ಭಾಲ್ಕಿ: ಸಮಾಜದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಅಧ್ಯಾತ್ಮದ ಜ್ಞಾನ ಅತ್ಯವಶ್ಯಕವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿವೃತ್ತ ಅಧ್ಯಕ್ಷ ಡಾ| ಎ.ಎಸ್‌.ಕಿರಣಕುಮಾರ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ|ಚನ್ನಬಸವ ಪಟ್ಟದ್ದೇವರ 20ನೇ ಸ್ಮರಣೋತ್ಸವ ನಿಮಿತ್ತ ರವಿವಾರ ನಡೆದ ವಚನ ಜಾತ್ರೆ-2019 ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ವಿಜ್ಞಾನ, ತಂತ್ರಜ್ಞಾನದಲ್ಲಿ ವಿಶೇಷ ಪ್ರಗತಿ ಸಾಧಿಸಿದರೂ, ಅಂಗೈಯಲ್ಲಿಯೇ ಪ್ರಪಂಚದ ಆಗುಹೋಗುಗಳನ್ನು ನೋಡುತ್ತಲಿದ್ದರೂ, ನಮ್ಮ ನೆರೆ ಹೊರೆಯ ಸಮಾಜದ ಆಗುಹೋಗುಗಳನ್ನು ನೋಡುವ ದೃಷ್ಟಿ ಬೆಳೆಸಿಕೊಂಡಿಲ್ಲ. ನಾವು ನಮ್ಮ ನೆರೆ ಹೊರೆಯ ಸಮಾಜದ ಆಗುಹೋಗುಗಳಬಗ್ಗೆ ತಿಳಿದುಕೊಳ್ಳಬೇಕಾದರೆ ವಿಜ್ಞಾನದ ಜ್ಞಾನಕ್ಕಿಂತಲೂ ನಮಗೆ ಆಧ್ಯಾತ್ಮದ ಜ್ಞಾನ ಅತ್ಯವಶ್ಯಕವಾಗಿದೆ ಎಂದರು. ಈ ನಿಟ್ಟಿನಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕ ತತ್ವ ಮತ್ತು ವಚನ ಸಾಹಿತ್ಯವನ್ನು ನೀಡಿ ನಮ್ಮಲ್ಲಿ ಬೆಳಕು ಮೂಡಿಸಿದ್ದಾರೆ. ಭೂಮಿಯ ಮೇಲೆ ಮಾನವನು ಸಾವಿರಾರು ವರ್ಷಗಳಕಾಲ ಉತ್ತಮ ಬದುಕು ಕಂಡು ಕೊಳ್ಳಬೇಕಾದರೆ ವಿಜ್ಞಾನದ ಸದ್ಬಳಕೆ ಮಾಡಿಕೊಂಡು ಆಧ್ಯಾತ್ಮ ತತ್ವಗಳನ್ನು ಅರಿಯಬೇಕು ಎಂದು ಹೇಳಿದರು.

ಸಾನ್ನಿಧ್ಯವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಒಬ್ಬ ಏಸು ತನ್ನ ತತ್ವಕ್ಕಾಗಿ ಜೀವ ತ್ಯಾಗಮಾಡಿದ್ದಕ್ಕೆ, ಜಗತ್ತೇ ಅವರನ್ನು ಪರಿಚಯಿಸಿದೆ. ಆದರೆ ಸಮಾಜದ ಏಳ್ಗೆಗಾಗಿ ವಚನ ಸಾಹಿತ್ಯ ರಕ್ಷಿಸಲು ನೂರಾರು ಶರಣರು ತಮ್ಮ ಪ್ರಾಣ ತ್ಯಾಗ ಮಾಡಿದರೂ ನಾವು ಅವರನ್ನು ಕರ್ನಾಟಕದಿಂದ ಹೊರಗೆ ಪರಿಚಯಿಸಿಲ್ಲ. ಇದು ನಮ್ಮ ದುರಂತ. ಹೀಗಾಗಿ ನಾವು ನಮ್ಮ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿ ಬಸವತತ್ವ ಪ್ರಚಾರಪಡಿಸುವ ನಿಟ್ಟಿನಲ್ಲಿ ರೂಪುರೇಷೆ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ವಚನ ಸಾಹಿತ್ಯವನ್ನು ಕನ್ನಡದಿಂದ ಮರಾಠಿ, ತೆಲುಗಿನಲ್ಲಿಯೂ ಅನುವಾದ ಮಾಡಿ ಪ್ರಕಟಿಸುತ್ತಲಿದ್ದೇವೆ ಎಂದು ಹೇಳಿದರು.

ತೆಲಂಗಾಣ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷ ಬಾದಾಮಿ ಶಿವಕುಮಾರ ವಚನ ಸಾಹಿತ್ಯ ಗ್ರಂಥಗಳ ಬಿಡುಗಡೆ ಮಾಡಿದರು. ಹಾವೇರಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ಮತ್ತು ಮನಕವಾಡನ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಸನ್ನಿಧಾನ ವಹಿಸಿ ಮಾತನಾಡಿದರು.

ಇದೇವೇಳೆ ಯುಪಿಎಸ್‌ಸಿ ಯಲ್ಲಿ 694 ರ್‍ಯಾಂಕ್‌ ಪಡೆದು ಉತ್ತೀರ್ಣರಾದ ಉಚ್ಚಾ ಗ್ರಾಮದ ವಿದ್ಯಾರ್ಥಿ ವೆಂಕಟರಾಮ ನಂದಗಾವೆ, ಡಾ| ವಿವೇಕ ನಿಂಬೂರೆ, ಡಾ| ವಿ.ವಿ.ನಾಗರಾಜ, ಸಾಹಿತಿ ವೀರಣ್ಣಾ ಕುಂಬಾರ ಅವರನ್ನು ಶ್ರೀಮಠದಿಂದ ಗೌರವಿಸಿ ಸನ್ಮಾನಿಸಲಾಯಿತು.

Advertisement

ಎಂ.ರವಿಕುಮಾರ, ಕಲ್ವಾ ಮಲ್ಲಿಕಾರ್ಜುನ, ಎ.ಆದಿನಾರಾಯಣರೆಡ್ಡಿ, ಡಾ| ಜಗನ್ನಾಥ ಹೆಬ್ಟಾಳೆ, ಪ್ರೊ| ಶಂಭುಲಿಂಗ ಕಾಮಣ್ಣ, ರಾಜಕುಮಾರ ಹೆಬ್ಟಾಳೆ, ಸಂಜೀವಕುಮಾರ ಜುಮ್ಮಾ ಉಪಸ್ಥಿತರಿದ್ದರು. ಬಸವರಾಜ ಧನ್ನೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಅಮೀತ ಅಷ್ಟೂರೆ ಬಸವಗುರು ಪೂಜೆ ನೆರವೇರಿಸಿದರು. ಶಿವಕುಮಾರ ಪಾಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಸುಪ್ರೀತ್‌ ಖಡ್ಕೆ ವಚನ ನೃತ್ಯ ನಡೆಸಿಕೊಟ್ಟನು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸ್ವಾಗತಿಸಿದರು. ಮದನ ಗಾಂವಕರ್‌ ನಿರೂಪಿಸಿದರು. ಸಿದ್ರಾಮಪ್ಪ ಅಣದೂರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next