Advertisement

ಗುಣಾತ್ಮಕ ಶಿಕ್ಷಣದಿಂದ ಸಮಾಜ ಪ್ರಗತಿ: ಗುರುಬಸವ ಶ್ರೀ

04:50 PM Jan 12, 2020 | Naveen |

ಭಾಲ್ಕಿ: ಸಮಾಜದ ತ್ವರಿತ ಮತ್ತು ಗುಣಾತ್ಮಕ ಬದಲಾವಣೆಗಾಗಿ ವಿದ್ಯಾರ್ಥಿಗಳಿಗೆ ಉತ್ತಮ, ಪರಿಣಾಮಕಾರಿ ಶಿಕ್ಷಣ ನೀಡುವುದು ಪಾಲಕರು, ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದು ಹಿರೇಮಠದ ಪೀಠಾಧಿ ಪತಿ ಶ್ರೀ ಗುರುಬಸವ ಪಟ್ಟದ್ದೇವರು ಅಭಿಮತ ವ್ಯಕ್ತಪಡಿಸಿದರು.

Advertisement

ಕರಡ್ಯಾಳ ಗ್ರಾಮದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಶನಿವಾರ
ಹಮ್ಮಿಕೊಂಡಿದ್ದ ಸಂಚಾಲಿತ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ
ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ಒದಗಿಸುವುದು ಗುರುಕುಲದ ಮೂಲ ಧ್ಯೇಯವಾಗಿದೆ. ಇಂದಿನ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಅವರಿಗೆ ಶಿಕ್ಷಕರು, ಪಾಲಕರು ಸೂಕ್ತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದಲ್ಲಿ ಅವರು ಜೀವನದಲ್ಲಿ ಎತ್ತರಮಟ್ಟಕ್ಕೆ ಬೆಳೆಯುತ್ತಾರೆ. ನಮ್ಮ ಗುರುಕುಲದಲ್ಲಿ ಕಲಿತು ನೂರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಕಣ್ಣಿನ ತಜ್ಞ ಸುಲಗುಂಟೆ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಉದ್ದೇಶ ಕೇವಲ ಹಣ ಗಳಿಕೆ
ಆಗಿರುವ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡಿ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಎಂಬಿಬಿಎಸ್‌ ಸೀಟು ಸಿಗುವಂತೆ
ಮಾಡುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ ಮಾದರಿ ಶಿಕ್ಷಣ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖಟಕ ಚಿಂಚೋಳಿ ವಲಯದ ಕಸಾಪ ಅಧ್ಯಕ್ಷ ರಾಜಕುಮಾರ ಬಿರಾದಾರ ಮಾತನಾಡಿ,
ಗುರುಕುಲದಲ್ಲಿ ದೊರೆತ ಒಳ್ಳೆಯ ಶಿಕ್ಷಣ, ಸಂಸ್ಕಾರದಿಂದ ಅನೇಕ ವಿದ್ಯಾರ್ಥಿಗಳು ಮೇರು
ಸಾಧನೆಗೈಯುತ್ತಿದ್ದಾರೆ. ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ ಕ್ರಾಂತಿಯಿಂದ ಸಾವಿರಾರು ಬಡ, ನಿರ್ಗತಿಕ ವಿದ್ಯಾರ್ಥಿಗಳ ಬಾಳು ಬೆಳಗುತ್ತಿದೆ ಎಂದು ಹೇಳಿದರು.

ವಕೀಲ ಸಂತೋಷ ಖಂಡಾಳೆ ಮಾತನಾಡಿ, ಪಾಲಕರ ವೈಜ ಆಸ್ತಿ ಮಕ್ಕಳು. ಹಾಗಾಗಿ,
ತಂದೆ-ತಾಯಿ ಮಕ್ಕಳಿಗಾಗಿ ಹಣವನ್ನು ಕೂಡಿಡದೆ ಅವರನ್ನೇ ಸಮಾಜದ ಅಮೂಲ್ಯ ಸಂಪತ್ತನ್ನಾಗಿಸಬೇಕು. ಇಂದಿನ ವಿದ್ಯಾರ್ಥಿಗಳು ಉತ್ತಮ ಬೌದ್ಧಿಕ ಮಟ್ಟ ಹೊಂದಿದ್ದಾರೆ. ಆದರೆ, ಅವರಲ್ಲಿ ಮಾನವೀಯ ಮೌಲ್ಯಗಳ ಕೊರತೆ ಕಂಡುಬರುತ್ತಿದೆ. ಶಿಕ್ಷಕರು, ಪೋಷಕರು ಸದ್ಗುಣ ಬೆಳೆಸುವತ್ತ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.

Advertisement

ಶ್ರೀ ಮಹಾಲಿಂಗ ಸ್ವಾಮೀಜಿ, ಶಿವಪ್ರಸಾದ ಸ್ವಾಮೀಜಿ, ತಾಲೂಕು ಪಂಚಾಯಿತಿ
ಅಧ್ಯಕ್ಷೆ ಮೀರಾಬಾಯಿ ಜನಾರ್ಧನ ಕಣಜೆ, ಮಕ್ಕಳ ತಜ್ಞ ಯುವರಾಜ ಜಾಧವ, ಡಿಸಿಸಿ
ಬ್ಯಾಂಕ್‌ ವ್ಯವಸ್ಥಾಪಕ ಸಂತೋಷ ದಾನಾ ಇದ್ದರು. ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ವಾರ್ಷಿಕ ವರದಿ ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಪಾಲಕರ ಮನ ಸೆಳೆದವು. ಮುಖ್ಯಶಿಕ್ಷಕ ಬಸವರಾಜ ಪ್ರಭಾ ಸ್ವಾಗತಿಸಿದರು. ಮಧುಕರ್‌
ಗಾಂವ್ಕರ್‌ ನಿರೂಪಿಸಿದರು. ಶಿವಪ್ರಕಾಶ ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next