ಭಾಲ್ಕಿ: ಸರ್ಕಾರ ರಾಜ್ಯದ ಹಿಂದುಳಿದ, ಅಲ್ಪ ಸಂಖ್ಯಾತ ಸೇರಿದಂತೆ ಎಲ್ಲ ವರ್ಗದವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಹಾಯ ಧನ ಮಂಜೂರು ಮಾಡುತ್ತಿದೆ. ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನದಿಂದ ಸ್ವಾವಲಂಬಿ ಬದುಕು ಸಾಗಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಫಲಾನುಭವಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಶಾಸಕರ ಗೃಹ ಕಚೇರಿ ಆವರಣದಲ್ಲಿ ಶನಿವಾರ ನಡೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2018-19ನೇ ಸಾಲಿನ ಪಶು ಭಾಗ್ಯ ಎಸ್‌ಸಿಪಿ/ಟಿಎಸ್‌ಪಿ ಫಲಾನುಭವಿಗಳಿಗೆ ಮಂಜೂರಾದ ಪ್ರಮಾಣ ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಯಾವ ಉದ್ದೇಶಕ್ಕಾಗಿ ಹಣ ಮಂಜೂರು ಮಾಡಿದೆಯೋ ಸಂಬಂಧವಟ್ಟವರು ಅದೇ ಉದ್ದೇಶಕ್ಕೆ ಬಳಸಬೇಕು. ಈ ಹಿಂದಿನ ಸರ್ಕಾರ ಪಶು ಭಾಗ್ಯ, ಕ್ಷೀರ ಭಾಗ್ಯ, ಅನ್ನ ಭಾಗ್ಯ, ಮಾತೃಪೂರ್ಣ ಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೊಳಿಸಿದೆ. ಸಹಾಯ ಧನ ಹಣ ಅರ್ಹ ರೈತರ, ಮಹಿಳೆಯರ, ವ್ಯಾಪಾರಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಪಶು ಭಾಗ್ಯ ಅಮೃತ ಯೋಜನೆ, ಸಾಮಾನ್ಯ ಯೋಜನೆಯಡಿ ತಾಲೂಕಿನ 259 ಫಲಾನುಭವಿಗಳಿಗೆ ಒಟ್ಟು 1.59 ಕೋಟಿ ರೂ. ಹಾಗೂ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಶ್ರಮಶಕ್ತಿ ಯೋಜನೆಯಡಿ 120 ಫಲಾನುಭವಿಗಳಿಗೆ ತಲಾ 25 ಸಾವಿರ ರೂ., ಡಾ|ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮೋಟಾರ ಮತ್ತು ಪಂಪ್‌ಸೆಟ್‌ಗಳನ್ನು 18 ಫಲಾನುಭವಿಗಳಿಗೆ, ಆಸ್ಪತ್ರೆ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೂವರು ಫಲಾನುಭವಿಗಳಿಗೆ ಹಾಗೂ ಸಿಡಿಲು ಬಡಿದು ಮೃತಪಟ್ಟ ಇಬ್ಬರು ಫಲಾನುಭವಿಗಳಿಗೆ ತಲಾ ರೂ. 5 ಲಕ್ಷದ ಚೆಕ್‌ಅನ್ನು ಸಂಬಂಧಿಸಿದವರಿಗೆ ಶಾಸಕರು ವಿತರಿಸಿದರು.
ತಾಪಂ ಸದಸ್ಯ ರಾಜಕುಮಾರ ಪಾಟೀಲ, ಶಿವರಾಜ ಪಾಟೀಲ, ಎಪಿಎಂಸಿ ಅಧ್ಯಕ್ಷ ಬಾಬುರಾವ್ ಪಾಟೀಲ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶೇಖರ ವಂಕೆ, ಪುರಸಭೆ ಸದಸ್ಯರಾದ ಬಸವರಾಜ ವಂಕೆ, ರಾಜಕುಮಾರ ವಂಕೆ, ವಿಜಯಕುಮಾರ ರಾಜಭವನ, ಮಾಣಿಕಪ್ಪ ರೇಷ್ಮೆ, ಮುಖಂಡರಾದ ಅಶೋಕ ಮಡ್ಡೆ, ಭಾವರಾವ್ ಪಾಟೀಲ, ಎಲ್.ಜಿ.ಗುಪ್ತಾ, ವಿಲಾಸ ಮೋರೆ, ಪ್ರಕಾಶ ಭಾವಿಕಟ್ಟಿ, ವಿಲಾಸ ಪಾಟೀಲ ದಾಡಗಿ ಉಪಸ್ಥಿತರಿದ್ದರು.