ಭಾಲ್ಕಿ: ನಾವದಗಿ ಗ್ರಾಮದಲ್ಲಿ ರವಿವಾರ ಸದ್ಗುರು ಶ್ರೀ ರೇವಪ್ಪಯ್ಯ ಶರಣರ ಹೋಳಿಗೆ ತುಪ್ಪದ ಬಿನ್ನಹ ಜಾತ್ರೆ ಸಂಭ್ರಮದಿಂದ ಜರುಗಿತು. ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರು ಹೋಳಿಗೆ ಮತ್ತು ಹೂರಣಗಡುಬುಗಳ ಜತೆಗೆ ಬಟ್ಟಲುಗಟ್ಟಲೇ ತುಪ್ಪ ಸವಿದರು.
ಪವಾಡ ಪುರಷ ಸದ್ಗುರು ಶ್ರೀ ರೇವಪ್ಪಯ್ಯ ಸ್ವಾಮಿಗಳ ಜೀವಿತ ಕಾಲಾವಧಿಯಿಂದಲೂ ಈ ಜಾತ್ರೆ ನಡೆದುಕೊಂಡು ಬಂದಿದೆ. ನಂತರದ ದಿನಗಳಲ್ಲೂ ಶ್ರೀಗಳ ಆಜ್ಞಾನುಸಾರ ಅವರ ಅನುಯಾಯಿಗಳು, ಹೋಳಿಗೆ ತುಪ್ಪ ಬಿನ್ನಹ ಜಾತ್ರೆಯನ್ನು ಮುಂದು ವರಿಸಿಕೊಂಡು ಬಂದಿದ್ದಾರೆ.
ಸದ್ಗುರುಗಳ ಜೀವಿತಾವಧಿ ಸಮಯದಲ್ಲಿ ಶ್ರೀಗಳ ಸಮ್ಮುಖದಲ್ಲಿ ಈ ಬಿನ್ನಹ ಜಾತ್ರೆಗೆ ತುಪ್ಪ ಕಡಿಮೆ ಬಿದ್ದರೆ ಶ್ರೀಗಳು, ಅಲ್ಲಿಯೇ ಇದ್ದ ತೆರೆದ ಬಾವಿಯ ನೀರನ್ನು ತುಪ್ಪವಾಗಿ ಪರಿವರ್ತಿಸಿ, ಭಕ್ತರಿಗೆ ಉಣ ಬಡಿಸಿದ್ದರು ಎನ್ನುವ ಪ್ರತೀತಿ ಇದೆ. ಹೀಗಾಗಿ ಶ್ರೀಗಳ ಈ ಪವಾಡದಿಂದ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಊಟದ ಪರಂಪರೆ ಮುಂದುವರಿದು ಬಂದಿದೆ. ಅಲ್ಲದೆ ಈ ಜಾತ್ರೆಯಲ್ಲಿ ಊಟ ಮಾಡಿದವರಿಗೆ ಯಾವುದೇ ರೋಗ ಬರುವುದಿಲ್ಲ ಎನ್ನುವ ವಿಶೇಷತೆ ಇದೆ. ಆದ್ದರಿಂದ ಸಾವಿರಾರು ಭಕ್ತರು ಈ ಜಾತ್ರೆಗೆ ಆಗಮಿಸಿ ತುಪ್ಪ ಹೋಳಿಗೆ ಪ್ರಸಾದ ಸ್ವೀಕರಿಸುತ್ತಾರೆ.
ಪ್ರಸ್ತುತ ವರ್ಷದ ಷಣ್ಮುಖಸ್ವಾಮಿ ಬಿನ್ನಹ ಜಾತ್ರೆ ನಿಮಿತ್ತ ರವಿವಾರ ಸದ್ಗುರು ರೇವಪ್ಪಯ್ನಾ ಸ್ವಾಮಿಗಳ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು. ನಸುಕಿನಿಂದಲೇ ದೇಗುಲಕ್ಕೆ ತೆರಳಿದ ಭಕ್ತರು ದಿನವೀಡಿ ಕಾಯಿ ಕರ್ಪೂರ, ಅರ್ಪಿಸಿ ದರ್ಶನ ಮಾಡಿದರು. ದರ್ಶನ ಪಡೆಯಲು ರಾಜ್ಯ, ನೆರೆಯ ರಾಜ್ಯದ ಭಕ್ತರು ಆಗಮಿಸಿ ದೇಗುಲದ ಮುಂದೆ ಸರತಿಯಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಗುಲದ ಪ್ರವೇಶದ್ವಾರ ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಜನೆ, ಪ್ರಾರ್ಥನೆ ವಿವಿಧ ಕೈಂಕರ್ಯಗಳು ನೆರವೇರಿದವು.
ದೇವಸ್ಥಾನದ ಪ್ರಮುಖರಾದ ಶಾಂತವೀರ ಸ್ವಾಮಿ, ರೇವಣಯ್ನಾ ಸ್ವಾಮಿ, ವೈಜಿನಾಥಪ್ಪ ಕನಕಟ್ಟೆ, ವೀರಪ್ಪಾ ಬೇಲೂರೆ, ಪ್ರದೀಪ ಪಾಟೀಲ, ಮಲ್ಲಿಕಾರ್ಜುನ ಶೇರಿಕಾರ, ಮಲ್ಲಿಕಾರ್ಜುನ ಕನಕಟ್ಟೆ, ವೈಜಿನಾಥಪ್ಪ ದಾಬಶೆಟ್ಟೆ, ಪ್ರಭು ಪಾಟೀಲ ಬ್ಯಾಲಹಳ್ಳಿ, ಶಿವರಾಜ ಪಾಟೀಲ ಮಾವಿನಹಳ್ಳಿ, ಡಾ| ಸಿ.ಎಸ್.ಮಾಲಿಪಾಟೀಲ, ಗ್ರಾಪಂ ಸದಸ್ಯ ರಾಜಶೇಖರ ಬಿರಾದಾರ, ರೇವಣಪ್ಪಾ ಪೋಲಿಸ್ ಪಾಟೀಲ, ಕಿಶನರಾವ್ ಲಮಾಣಿ ಮುಂತಾದವರು ಇದ್ದರು.