Advertisement

ಭಲೇ ಟೀಚರ್

10:06 AM Jul 04, 2019 | mahesh |

ತಮ್ಮೂರಿನ ಶಿಕ್ಷಕರನ್ನೂ ಎತ್ತಂಗಡಿ ಮಾಡಿಸುವಂತೆ ಜನ ಒತ್ತಾಯಿಸುವುದನ್ನು ಕೇಳಿದ್ದೀರಿ. ಆದರೆ ಈ ಸುದ್ದಿ ಡಿಫ‌ರೆಂಟ್‌. ತಮ್ಮೂರಿನ ಶಿಕ್ಷಕಿ ಭಡ್ತಿ ಪಡೆದು ಬೇರೊಂದು ಶಾಲೆಗೆ ಹೋಗುತ್ತಾರೆ ಎಂದು ತಿಳಿದಾಗ, ಊರಿನ ಹಿರಿಯರು-ಮಕ್ಕಳು ಉಪವಾಸ ಕೂತು, ಆ ವರ್ಗಾವಣೆಯನ್ನೇ ರದ್ದು ಪಡಿಸುವಂತೆ ಮಾಡಿದ ಅಪರೂಪದ ಸುದ್ದಿ ಇದು…

Advertisement

ಈ ಊರಿನ ಹೆಸರು ಖಾನಾಪುರ ಮಹಲ್‌ ನರೇಂದ್ರ. ಇದು, ವಿದ್ಯಾಕಾಶಿ ಧಾರವಾಡದಿಂದ ಕೇವಲ 7 ಕಿ.ಮೀ. ದೂರದಲ್ಲಿದೆ. ಸಮುದ್ರದ ನಂಟು, ಉಪ್ಪಿಗೆ ಬಡತನ ಎಂಬ ಮಾತಿದೆಯಲ್ಲ; ನರೇಂದ್ರ ಗ್ರಾಮದ ಕಥೆಯೂ ಹಾಗೇ ಇತ್ತು. ವಿದ್ಯಾಕಾಶಿಗೆ ತುಂಬ ಹತ್ತಿರದಲ್ಲೇ ಇದ್ದರೂ, ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಉತ್ಸಾಹ ಅಲ್ಲಿನ ಜನರಿಗೆ ಇರಲಿಲ್ಲ. ದೊಡ್ಡವರೆಲ್ಲ “ ಹೊಲವೇ ನಮ್ಮ ಬದುಕು’ ಎಂದುಕೊಂಡು ಬದುಕುತ್ತಿದ್ದರು. ಊರ ತುಂಬಾ ಇದ್ದ ಮಕ್ಕಳೂ, ಶಾಸ್ತ್ರಕ್ಕೆಂಬಂತೆ ಬೆಳಗಿನಿಂದ ಮಧ್ಯಾಹ್ನದವರೆಗೆ ಮಾತ್ರ ಶಾಲೆಗೆ ಹೋಗಿ ಬಂದು, ಆನಂತರ ಊರಾಚೆಗಿನ ಬಯಲಿನಲ್ಲಿ ಆಟವಾಡುತ್ತ ಟೈಂಪಾಸ್‌ ಮಾಡುತ್ತಿದ್ದವು. ಮಕ್ಕಳು ದನ ಕಾದರೆ ಸಾಕು ಎಂದೇ ಹೆತ್ತವರು ಯೋಚಿಸುತ್ತಿದ್ದ ಕಾರಣ, ಊರೆಂಬ ಊರೊಳಗೆ ಅಕ್ಷರ ದಾರಿದ್ರé ತುಂಬಿಕೊಂಡಿತ್ತು.

ಇಂತಿಪ್ಪ ಹಳ್ಳಿಗೆ, ಬರೋಬ್ಬರಿ 22 ವರ್ಷಗಳ ಹಿಂದೆ, ಅಂದರೆ, 1998ರಲ್ಲಿ ಶಿಕ್ಷಕಿಯಾಗಿ ಬಂದವರು ರೇಣುಕಾ ಜಾಧವ್‌. ಊರಿನ ಕೊನೆಯ ಸ್ಟಾಪಿನಲ್ಲಿ ಬಸ್ಸಿಳಿದು, ಸುತ್ತಲೂ ಕಣ್ಣು ಹಾಯಿಸಿದ ಅವರಿಗೆ ಕಾಣಸಿದ್ದು ಕೃಷಿ ಭೂಮಿ, ಒಂದಷ್ಟು ಮನೆಗಳು. ತಮ್ಮನನ್ನೋ ತಂಗಿಯನ್ನೋ ಟೊಂಕದಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ 10-12ವರ್ಷದ ಮಕ್ಕಳು ! ಇದರಿಂದ ಗಲಿಬಿಲಿಯಾದರೂ, ಅದನ್ನು ತೋರಗೊಡದೆ, ಊರ ಮುಖಂಡ ಪಾಟೀಲರನ್ನು ಭೇಟಿಯಾಗಿ, “ಶಾಲೆ ಎಲ್ಲಿದೆ ಗೌಡರೆ’? ‌ ಎಂದು ಕೇಳಿದರು. ಗೌಡರು ಮುಗುಳ್ನಕ್ಕು-‘ಶಾಲೆ ಇಲ್ಲವಲ್ರಿ ಅಕ್ಕಾರೆ… ನೀವ್ಯಾರು? ’ ಎಂದು ಮರು ಪ್ರಶ್ನೆ ಹಾಕಿದರು. “ನಾನು ನಿಮ್ಮೂರಿನ ಶಾಲೆಗೆ ಹೊಸದಾಗಿ ಬಂದಿರುವ ಶಿಕ್ಷಕಿ ‘ ಎಂಬ ಉತ್ತರ ಕೇಳಿ-“ಹೌದೇನ್ರಿ, ಅಲ್ಲಿದೆ ನೋಡ್ರಿ, ಅದೇ ಶಾಲೆ…’ ಎನ್ನುತ್ತಾ ಹನುಮಂತ ದೇವರ ಗುಡಿಯನ್ನು ತೋರಿಸಿದರಂತೆ.

ಭಗವಂತಾ, ದಾರಿ ತೋರು…
ಗೌಡರಿಗೆ ಧನ್ಯವಾದ ಹೇಳಿದ ರೇಣುಕಾ ಟೀಚರ್‌, ಒಮ್ಮೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಊರಿನಲ್ಲಿ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಹನುಮನ ದೇವರ ಗುಡಿಯಲ್ಲೇ ಶಾಲೆ ನಡೆಸಲಾಗುತ್ತಿದೆ ಎಂಬ ಸಂಗತಿ ಅರಿವಿಗೆ ಬಂತು. ಆಗಲೇ ದೇವರ ಮುಂದೆ ನಿಂತು ಪ್ರಾರ್ಥಿಸಿದರು: ಈ ಊರಲ್ಲಿ ನಾನು ವಿದ್ಯಾಗುಡಿ ಕಟ್ಟಲೇಬೇಕು. ಇಲ್ಲಿನ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಬೇಕು… ಭಗವಂತಾ, ದಯೆ ತೋರು…

ಆನಂತರದಲ್ಲಿ ರೇಣುಕಾ ಟೀಚರ್‌, ಆ ಊರಿನ ಪ್ರತಿಯೊಂದು ಮನೆಯ ಬಾಗಿಲು ಬಡಿದರು. ನಾನು ನಿಮ್ಮೂರಿಗೆ ಹೊಸದಾಗಿ ಬಂದಿರುವ ಟೀಚರ್‌. ನಿಮ್ಮ ಮಕ್ಕಳು ಓದಿ ಆಫೀಸರ್‌ ಆಗುವುದು ಬೇಡವಾ? ಅವರಿಗೆ ಅಕ್ಷರ ಕಲಿಸುವ ಹೊಣೆ ನನ್ನದು. ನಾಳೆಯಿಂದಲೇ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ’ ಎಂದು ಮನವಿ ಮಾಡಿದರು. ರೇಣುಕಾ ಅವರ ವಿಯನ್‌ ಮಾತು ಊರ ಜನರ ಮನ ಗೆದ್ದಿತು. ಪರಿಣಾಮ, 8 ಮಕ್ಕಳಿದ್ದ ಶಾಲೆಯಲ್ಲಿ 25 ಮಕ್ಕಳು ಕಾಣಿಸಿಕೊಂಡರು.

Advertisement

ಸೆಂಚುರಿ ಸಂಭ್ರಮ
ಆನಂತರದಲ್ಲಿ ಮಕ್ಕಳ ಕಲರವ, ಅವರ ಪದ್ಯ ಹೇಳುವ ಸೊಗಸು, ಪ್ರಾರ್ಥನೆ ಮಾಡುವಾಗಿನ ರಾಗಾಲಾಪ, ಅಕ್ಷರ ಕಲಿಯುವಾಗಿನ ಹುಮ್ಮಸ್ಸು, ಟೀಚರ್‌ ಕೈಲಿ.
ಗುಡ್‌ ಅನ್ನಿಸಿಕೊಂಡಾಗಿನ ತೇಜಸ್ಸು, ನಿತ್ಯ-ನಿರಂತರ ಅನ್ನುವಂತಾಯಿತು. ಹನುಮನ ಗುಡಿ, ನರೇಂದ್ರದ ಕಿರಿಯ ಪ್ರಾಥಮಿಕ ಶಾಲೆ ಆಯಿತು. ರೇಣುಕಾ ಟೀಚರ್‌ ಚೆನ್ನಾಗಿ ಪಾಠ ಮಾಡ್ತಾರೆ ಎಂಬ ಮಾತು ಮಕ್ಕಳ ಮೂಲಕ ಮನೆ ಮನೆಯನ್ನೂ ತಲುಪಿತು. ಪರಿಣಾಮ, ನಾಲ್ಕು ವರ್ಷ ಕಳೆಯುವಷ್ಟರಲ್ಲಿ, ವಿದ್ಯಾರ್ಥಿಗಳ ಸಂಖ್ಯೆ ನೂರನ್ನು ಮುಟ್ಟಿತು! ಆಗ ಎದುರಾದದ್ದೇ ಜಾಗದ ಸಮಸ್ಯೆ. ನೂರು ಮಕ್ಕಳನ್ನು ಹನುಮನ ದೇಗುಲದಲ್ಲಿ ಕೂರಿಸುವುದು ಹೇಗೆ?

ಜನ ಜೊತೆಗೆ ನಿಂತರು
ರೇಣುಕಾ ಟೀಚರ್‌ ಧೃತಿ ಗೆಡಲಿಲ್ಲ. ಮತ್ತೆ ಊರಿನ ಎಲ್ಲ ಮನೆಯ ಬಾಗಿಲು ತಟ್ಟಿದರು. ಮಕ್ಕಳಿಗೆ, ಶಾಲಾ ಕಟ್ಟಡದ ಅಗತ್ಯವಿದೆ. ಸರ್ಕಾರಿ ಅನುದಾನದ ಹಣ ಏನೇನೂ ಸಾಲದು. ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಜೋಳಿಗೆ ಹಿಡಿದರು. “ಬೇಡುವ ಕೈಗಳು ಶುದ್ಧವಾಗಿದ್ದರೆ, ನೀಡುವ ಕೈಗಳೂ ಸಿದ್ಧವಾಗಿರುತ್ತವೆ ‘ೆಎಂಬ ಮಾತು ಇಲ್ಲಿ ನಿಜವಾಯಿತು. ನಮ್ಮೂರಿನಲ್ಲಿ ಕಟ್ಟುವ ಸ್ಕೂಲ್‌ಗೆ ತಾನೆ? ಒಂದಷ್ಟು ಹಣ ಕೊಡೋಣ ಎಂಬ ಮನಸ್ಸು ಎಲ್ಲರಿಗೂ ಬಂತು. ಹೀಗೆ ಸಂಗ್ರಹವಾದ 25 ಸಾವಿರ ರೂ.ಗಳನ್ನು ಗ್ರಾಮಸ್ಥರ ಮುಂದಿಟ್ಟು “ ಶಾಲಾ ಕಟ್ಟಡ ನಿರ್ಮಾಣಕ್ಕೆ ಕೆಲಸ ಶುರು ಆಗಬೇಕು ‘ ಅಂದರು .

ಅದಕ್ಕೂ ಮೊದಲು, ಮೊದಲ ಎರಡು ವರ್ಷ ಒಂದು ದಿನವೂ ರಜೆ ಪಡೆಯದೆ ಈಕೆ ಕೆಲಸ ಮಾಡಿದ್ದನ್ನು ಊರ ಜನ ಗಮನಿಸಿದ್ದರು. “ ಸ್ಕೂಲ್‌ ಕೆಲಸಕ್ಕೆ ಜೈ’ ಅಂದುಕೊಂಡೇ ಎಲ್ಲರೂ ಬಂದಿದ್ದರಿಂದ ಹಾಂಹೂಂ ಅನ್ನುವುದೊರಳಗೆ ಶಾಲೆ ನಿರ್ಮಾಣವಾಯ್ತು. ಶಾಲೆಗೆ ಅಗತ್ಯವಿದ್ದ ಕುರ್ಚಿ, ಬೋರ್ಡ್‌, ಟೇಬಲ್‌, ಗ್ಲಾಸ್‌… ಹೀಗೆ ಒಂದೊಂದು ವಸ್ತು “ ತಂದುಕೊಡುವ ಜವಾಬ್ದಾರಿಯನ್ನು ಒಬ್ಬೊಬ್ಬರು ಹೊತ್ತುಕೊಂಡರು. ಪರಿಣಾಮ, ಶಾಲೆಯು ಜ್ಞಾನಮಂದಿರವಾಗಿ ಬದಲಾಯಿತು.

ಹೀಗೇ ದಿನಗಳು, ವರ್ಷಗಳು ಕಳೆದವು. “ಭಾಳಾ ಒಳ್ಳೇವ್ರು ನಮ್‌ ಮಿಸ್ಸು’ ಎಂಬುದು ಗ್ರಾಮದ ಎಲ್ಲರ ಮಾತಾಗಿದ್ದಾಗಲೇ, ಸರ್ಕಾರ ರೇಣುಕಾ ಟೀಚರ್‌ ಅವರನ್ನು ಟ್ರಾನ್ಸ್‌ಫ‌ರ್‌ ಮಾಡಿತು. ಸುದ್ದಿ ತಿಳಿದ ಗ್ರಾಮಸ್ಥರು, ಶಾಲಾ ಮಕ್ಕಳು ಕಂಗಾಲಾದರು. “ರೇಣುಕಾ ಟೀಚರ್‌, ನಮ್ಮ ಊರಿನ ಒಂದು ಭಾಗ. ಅವರು ನಮಗೇ ಬೇಕು. ಅವರ ವರ್ಗಾವಣೆ ರದ್ದಾಗಲಿ. ಅವರನ್ನು ನಾವು ಊರಿಂದ ಕಳಿಸುವುದಿಲ್ಲ ’ ಎಂದು ಹಠ ಹಿಡಿದರು. ಜನರ ಮಾತು ಕೇಳಲು ಸರ್ಕಾರ ಸಿದ್ಧವಿರಲಿಲ್ಲ. ಆಗ, ಇಡೀ ಊರಿನ ಜನ ರೇಣುಕಾ ಟೀಚರ್‌ ವರ್ಗಾವಣೆ ರದ್ದಾಗಲಿ ಎಂದು ಒತ್ತಾಯಿಸಿ ಉಪವಾಸ ಕೂತರು.

ಪ್ರಮೋಷನ್‌ ನೀಡಿ ವರ್ಗಾವಣೆ ಮಾಡಿದ್ದರಿಂದ, ರೇಣುಕಾ ಟೀಚರ್‌ ಸುಮ್ಮನಿರಲು ಸಾಧ್ಯವಿರಲಿಲ್ಲ. ಅವರು ಹೊರಟು ನಿಂತಾಗ,ಗ್ರಾಮದ ಅಷ್ಟೂ ಜನ ಕಣ್ತುಂಬಿಕೊಂಡು ನಿಂತರು. ಆ ಕ್ಷಣದಲ್ಲೇ ರೇಣುಕಾ ಟೀಚರ್‌ ಮನಸ್ಸು ಬದಲಿಸಿದರು. ಅದೇ ವೇಳೆಗೆ, ಜನರ ಒತ್ತಾಯಕ್ಕೆ ಮಣಿದ ಸರ್ಕಾರ, ಅವರ ವರ್ಗಾವಣೆಯನ್ನು ರದ್ದು ಮಾಡಿದ ಸುದ್ದಿಯೂ ಬಂತು…

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next