ಒಂದು ದಿನ ವ್ಯಾಪಾರಿ ಮಗನನ್ನು ಕರೆದು- “ಮಗನೇ, ನಾನಿಲ್ಲದ ಸಮಯದಲ್ಲಿ ನೀನು ಹೊರಗೆ ತಿರುಗಬೇಡ. ಜಾಗ್ರತೆಯಿಂದ ಮನೆಯಲ್ಲಿಯೇ ಇರು. ಒಂದು ವೇಳೆ ಹೊರಗೆ ಹೋದರೂ, ದಕ್ಷಿಣ ದಿಕ್ಕಿಗೆ ಮಾತ್ರ ಹೋಗಬೇಡ’ ಎಂದು ಎಚ್ಚರಿಸಿದ. ಆದರೆ, ಶಿವಪ್ಪ ಆ ಮಾತನ್ನು ಲೆಕ್ಕಿಸದೆ ದಕ್ಷಿಣ ದಿಕ್ಕಿನತ್ತ ಹೊರಟ…
ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಸದಾ ಅವನು ಊರಿಂದ ಊರಿಗೆ ತಿರುಗುತ್ತಾ ವ್ಯಾಪಾರ ಮಾಡುತ್ತಿದ್ದ. ಹೀಗಾಗಿ ಹೆಚ್ಚಾಗಿ ಮನೆಯಲ್ಲಿ ಇರುತ್ತಿಲೇ ಇರಲಿಲ್ಲ. ಅವನಿಗೆ ಮದುವೆಯಾಗಿತ್ತು ಮತ್ತು ಒಬ್ಬ ಮಗ ಕೂಡಾ ಇದ್ದ. ಅವನ ಹೆಸರು ಶಿವಪ್ಪ. ಅವನಿಗೆ ಎಂಟು ವರ್ಷ ವಯಸ್ಸು. ಬಹಳ ತುಂಟ ಹುಡುಗ. ಯಾವಾಗಲೂ ಚೇಷ್ಟೆ ಮಾಡುತ್ತಾ ಓಡಾಡುತ್ತಿದ್ದ.
ಹೀಗಿರುವಾಗ ವ್ಯಾಪಾರಿಯ ಹೆಂಡತಿಗೆ ಅನಾರೋಗ್ಯ ಕಾಡಿತು. ಅದರಿಂದ ಅವಳು ತೀರಿಕೊಂಡಳು. ವ್ಯಾಪಾರಿಯು ಬಹಳ ದುಃಖದಿಂದ ಬಳಲಿದ. ಅವನಿಗೆ ಸಂಬಂಧಿಕರಾರೂ ಇರಲಿಲ್ಲ. ಆದರೂ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಲೇಬೇಕಾಗಿತ್ತು. ಊರೂರು ತಿರುಗಬೇಕಿತ್ತು. ಅವನ ಒಬ್ಬನೇ ಮಗ ಶಿವಪ್ಪ ತಬ್ಬಲಿಯಾದ. ವ್ಯಾಪಾರಿಯು, ಮಗನನ್ನು ಒಂಟಿಯಾಗಿ ಬಿಟ್ಟು ವ್ಯಾಪಾರ ಮಾಡಲು ಹೋಗುತ್ತಿದ್ದ.
ಒಂದು ದಿನ ವ್ಯಾಪಾರಿ ವ್ಯಾಪಾರಕ್ಕೆ ಹೋಗುವ ಮುನ್ನ ಮಗನನ್ನು ಕರೆದು ಹೀಗೆ ಹೇಳಿದ “ಮಗನೇ, ನಾನಿಲ್ಲದ ಸಮಯದಲ್ಲಿ ನೀನು ಹೊರಗೆ ತಿರುಗಬೇಡ. ಜಾಗ್ರತೆಯಿಂದ ಮನೆಯಲ್ಲಿಯೇ ಇರು. ಒಂದು ವೇಳೆ ಹೊರಗೆ ಹೋದರೂ, ದಕ್ಷಿಣ ದಿಕ್ಕಿಗೆ ಮಾತ್ರ ಹೋಗಬೇಡ’ ಎಂದು ಎಚ್ಚರಿಸಿದ. ಆಗ ಶಿವಪ್ಪ ಏಕೆ “ಅಪ್ಪ, ಆ ದಿಕ್ಕಿಗೆ ಮಾತ್ರ ಏಕೆ ಹೋಗಬಾರದು?’ ಎಂದು ಕುತೂಹಲದಿಂದ ಕೇಳಿದ. ಆಗ ವ್ಯಾಪಾರಿ, “ಮಗು, ಅಲ್ಲಿ ದೊಡ್ಡ ರಾಕ್ಷಸನೊಬ್ಬ ವಾಸವಾಗಿದ್ದಾನೆ. ಅವನು ಅಲ್ಲಿಗೆ ಹೋದ ಮಾನವರನ್ನು, ದನಕರುಗಳನ್ನು ತಿನ್ನುತ್ತಿದ್ದಾನೆ. ಆದ್ದರಿಂದ ಆ ದಿಕ್ಕಿಗೆ ನೀನು ಹೋಗಬಾರದು’ ಎಂದ.
ಈ ರೀತಿ ಮಗನಿಗೆ ಬುದ್ಧಿ ಹೇಳಿದ ವ್ಯಾಪಾರಿ ತನ್ನ ಪಾಡಿಗೆ ತಾನು ವ್ಯಾಪಾರಕ್ಕೆಂದು ಬೇರೆ ಊರಿಗೆ ಹೋದ. ತಂದೆ ಅತ್ತ ಕಡೆ ಹೋದ ನಂತರ ಶಿವಪ್ಪ ದಕ್ಷಿಣ ದಿಕ್ಕಿಗೆ ಹೋಗಬೇಕೆಂದು ನಿರ್ಧಾರ ಮಾಡಿದ. ಶಿವಪ್ಪ ತುಂಬಾ ಧೈರ್ಯವಂತ. ತಾಯಿ ಸತ್ತ ಮೇಲೆ ಅವನನ್ನು ಯಾರೂ ಪ್ರೀತಿ-ಮಮತೆಯಿಂದ ನೋಡಿರಲಿಲ್ಲ. ಹಾಗಾಗಿ ಅವನಿಗೆ ಭಯ-ಭೀತಿ ಎಂಬುದೇ ಗೊತ್ತಿರಲಿಲ್ಲ. ಹೀಗಾಗಿ ಆತ ಧೈರ್ಯದಿಂದ ದಕ್ಷಿಣ ದಿಕ್ಕಿಗೆ ಹೊರಟ.
ಸ್ವಲ್ಪ ದೂರ ಹೋದ ಮೇಲೆ ಆ ರಾಕ್ಷಸ ಎದುರಾದ. ಶಿವಪ್ಪ ರಾಕ್ಷಸನನ್ನು ನೋಡಿ ಹೆದರಲಿಲ್ಲ. ಬದಲಾಗಿ, “ನೀನೇನಾ, ಎಲ್ಲಾ ಜನರನ್ನು, ದನ-ಕರುಗಳನ್ನು ತಿನ್ನುತ್ತಿರುವ ರಾಕ್ಷಸ?’ ಎಂದು ಧೈರ್ಯದಿಂದ ಪ್ರಶ್ನಿಸಿದ. ಈ ಮಾತನ್ನು ಕೇಳಿ ಆ ರಾಕ್ಷಸನಿಗೆ ಆಶ್ಚರ್ಯವಾಯಿತು. ಈ ಬಾಲಕನಲ್ಲಿ ಎಂಥ ಧೈರ್ಯವಿದೆ ಎಂದು ರಾಕ್ಷಸ ತಬ್ಬಿಬ್ಟಾದ. ಬಳಿಕ ರಾಕ್ಷಸ ಶಿವಪ್ಪನನ್ನು ತಿನ್ನಲು ಪ್ರಯತ್ನಿಸಿದ. ಒಂದು ಕೊಡಲಿಯನ್ನು ತೆಗೆದುಕೊಂಡು ಶಿವಪ್ಪನನ್ನು ಹೊಡೆಯಲು ಮುಂದಾದ. ಅದಕ್ಕೆ ಹೆದರದ ಶಿವಪ್ಪ ಅದೇ ಕೊಡಲಿಯನ್ನು ಕಸಿದುಕೊಂಡು ರಾಕ್ಷಸನ ಗಡ್ಡಕ್ಕೆ ಮೇಲೆ ಜೋರಾಗಿ ಹೊಡೆದ. ಆ ರಾಕ್ಷಸನ ಜೀವ ಆತನ ಗಡ್ಡದಲ್ಲಿತ್ತಂತೆ. ಹೀಗಾಗಿ ಆ ರಾಕ್ಷಸ ಸತ್ತುಬಿದ್ದ.
ಆ ರಾಕ್ಷಸ ರಾಜಕುಮಾರಿಯನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದ. ವಿಷಯ ತಿಳಿದ ಶಿವಪ್ಪ ರಾಕ್ಷಸನ ವಶದಲ್ಲಿದ್ದ ರಾಜಕುಮಾರಿಯನ್ನು ಬಿಡುಗಡೆಗೊಳಿಸಿ, ಊರಿಗೆ ಕರೆದುಕೊಂಡು ಬಂದ. ಈ ಸುದ್ದಿ ರಾಜನಿಗೆ ತಿಳಿಯಿತು. ಆಗ ರಾಜನು ಶಿವಪ್ಪನನ್ನು ಹೊಗಳಿ, ತನ್ನ ರಾಜ್ಯದಲ್ಲಿ ಅರ್ಧ ಭಾಗವನ್ನು ಕೊಟ್ಟ. ಹೀಗೆ ಶಿವಪ್ಪನು ತನ್ನ ಧೈರ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾದ, ಎಲ್ಲರೂ ಅವನನ್ನು ಹೊಗಳಿದರು.
ಪುರುಷೋತ್ತಮ್