Advertisement
ಮೈಸೂರು ರಸ್ತೆಯ ಪುರಾತನ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವರ ಮೂರ್ತಿಗೆ ಹೂವಿನ ಅಲಂಕಾರ, ತೋಮಾಲೆ ಹಾಗೂ ವಡೆಮಾಲೆ ಅರ್ಪಣೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿನ ಸೀತಾರಾಮ ಗುಡಿಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗೆ ಬೆಳ್ಳಿ ಕವಚ ಧಾರಣೆಯೊಂದಿಗೆ ವಿಶೇಷ ಹೂವಿನ ಅಲಂಕಾರಮಾಡಲಾಗಿತ್ತು. ಇನ್ನು ದೇವಾಲಯದಲ್ಲಿ ಧನುರ್ಮಾಸದ ಅಂಗವಾಗಿ ದಿನ ಪೂರ್ತಿ ಭಜನಾ ಕಾರ್ಯಕ್ರಮ ನಡೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಲಾಡು ಪ್ರಸಾದ ವಿತರಿಸಲಾಯಿತು. ದೇವಾಲಯದ ಬಳಿಯ ಪೂಜಾ ಸಾಮಗ್ರಿ ಮಳಿಗಳು ಆಂಜನೇಯ ಯಂತ್ರಕೊಳ್ಳುವ ಭಕ್ತರಿಂದ ತುಂಬಿದ್ದವು. ಯಡಿಯೂರಿನ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ ಸೇವೆ, ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ಮತ್ತು ಅನ್ನಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು.
ಸುವರ್ಣ ಮಹೋತ್ಸವ: ಜಯನಗರದ ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಈ ಬಾರಿ ಹನುಮ ಜಯಂತಿಯ ಸುವರ್ಣ ಮಹೋತ್ಸ ಆಚರಿಸಲಾಯಿತು. ಮುಂಜಾನೆ ವಿವಿಧ ಅಭಿಷೇಕಗಳನ್ನು ಮಾಡಲಾಯಿತು. ಆನಂತರ ವಜ್ರ ಕಿರೀಟ ಸಹಿತ ವಜ್ರ ಕವಚ ಧಾರಣೆಯೊಂದಿಗೆ ಹನುಮ ಮೂರ್ತಿಯನ್ನು ಶೃಂಗರಿಸಲಾಗಿತ್ತು. ಸಾವಿರಾರು ಭಕ್ತಯರು ಕಣ್ತುಂಬಿಕೊಂಡರು. ಸಂಜೆ ಭರತನಾಟ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವಿಜಯನಗರದ ಸನಾತನ ಭಕ್ತ ಮಂಡಳಿ, ಆರ್‌ಪಿಸಿ ಬಡಾವಣೆಯ ಪಂಚಮುಖೀ ಆಂಜನೇಯ ದೇವಾಲಯ, ಮಾರತ್‌ಹಳ್ಳಿಯ ಆಂಜನೇಯಸ್ವಾಮಿ ದೇವಾಲಯ, ದಾಸನಪುರದ ವೀರಾಂಜನೇಯಸ್ವಾಮಿ, ಹೊಸಕೆರೆಹಳ್ಳಿಯ
ಅಭಯಾಂಜನೇಯ ಸ್ವಾಮಿ, ಯಶವಂತಪುರದ ದಾರಿ ಆಂಜನೇಯ ಸ್ವಾಮಿ ದೇವಾಲಯ, ಗುಟ್ಟಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಹನುಮ ಜಯಂತಿಯ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.