ಬೆಂಗಳೂರು: ಬಿಹಾರದ ಜಾತಿಗಣತಿ ಬಹಿರಂಗವಾಗುತ್ತಿದ್ದಂತೆ ರಾಜ್ಯದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಅಯೋಗದಿಂದ ಪಡೆದು ಬಹಿರಂಗಪಡಿಸಬೇಕು, ನ್ಯಾ| ಡಾ| ಕೆ. ಭಕ್ತವತ್ಸಲ ಸಮಿತಿಯ ವರದಿ ಜಾರಿಯಾಗಬೇಕು ಎಂಬಿತ್ಯಾದಿ ಕೂಗು ಎದ್ದಿದೆ.
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ನ್ಯಾ| ಭಕ್ತವತ್ಸಲ ಸಮಿತಿಯ ವರದಿ ಚರ್ಚೆಗೆ ಬರುವ ಸಾಧ್ಯತೆಗಳಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರವೂ ಸೇರಿದಂತೆ ಜಾತಿಗಣತಿ ಮತ್ತು ಮೀಸಲಾತಿ ಬಗ್ಗೆ ಸಮಾಲೋಚನೆ ನಡೆಯಲಿದೆ.
ಹಿಂದುಳಿದ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸುವ ಸಂಬಂಧ ಸುಪ್ರೀಂ ಕೋರ್ಟ್ ಮುಂದೆ ಪ್ರಕರಣವಿದ್ದರಿಂದ ಸಮಿತಿ ರಚಿಸಿದ್ದ ಹಿಂದಿನ ಸರಕಾರ, 2022ರಲ್ಲಿ ಮಧ್ಯಾಂತರ ವರದಿ ಪಡೆದು ಸಂಪುಟ ಸಭೆಯಲ್ಲಿ ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು.
2023ರ ಜೂನ್ ತಿಂಗಳಲ್ಲಿ ಸಮಿತಿಯು ತನ್ನ ಅಂತಿಮ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿದ್ದು, ರಾಜಕೀಯ ಪ್ರಾತಿನಿಧ್ಯ ಖಚಿತವಾದ ಅನಂತರವೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದರಿಂದ ಈ ವರದಿ ಪ್ರಮುಖ ಪಾತ್ರ ವಹಿಸಲಿದೆ.
ಹಿಂದುಳಿದ ವರ್ಗಗಳನ್ನು ನಾಲ್ಕು ಪ್ರವರ್ಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿದ್ದ ಸಮಿತಿ, ಶೇ.33 ರಷ್ಟು ಮೀಸಲಾತಿ ನಾಲ್ಕೂ ಪ್ರವರ್ಗಗಳಿಗೆ ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು. ಪ್ರವರ್ಗ-1 ರಲ್ಲಿರುವ ಅತ್ಯಂತ ಹಿಂದುಳಿದ 381 ಜಾತಿಗಳಿಗೆ ಶೇ.99, ಪ್ರವರ್ಗ-2 ರಡಿ 367 ಜಾತಿಗಳಿಗೆ ಶೇ.99, ಪ್ರವರ್ಗ-“ಬಿ’ಯಲ್ಲಿರುವ ಮುಸ್ಲಿಂ, ಪ್ರವರ್ಗ-3(ಎ)ದಲ್ಲಿರುವ ಕೊಡವ, ಬಲಿಜ ಹಾಗೂ ಇನ್ನಿತರ 12 ಜಾತಿಗಳು ಮತ್ತು ಪ್ರವರ್ಗ-3 (ಬಿ)ಯಲ್ಲಿರುವ ಮರಾಠ, ಉಪಜಾತಿಗಳು, ಕ್ರಿಶ್ಚಿಯನ್ ಸೇರಿ ಒಟ್ಟು 32 ಜಾತಿಗಳಿಗೆ ಶೇ.6.6 ಹಾಗೂ ಪ್ರವರ್ಗ-4 ರಡಿ ಪ್ರವರ್ಗ-3 (ಎ)ದಲ್ಲಿರುವ ಒಕ್ಕಲಿಗ ಮತ್ತು 19 ಉಪಜಾತಿ, ಪ್ರವರ್ಗ-3 (ಬಿ) ಯಲ್ಲಿರುವ ವೀರಶೈವ ಲಿಂಗಾಯತ ಮತ್ತು ಉಪಜಾತಿಗಳಿಗೆ ಶೇ.6.6 ರಷ್ಟು ಮೀಸಲಾತಿ ಕಲ್ಪಿಸುವ ಕುರಿತಂತೆ ಸಮಿತಿ ಶಿಫಾರಸು ಮಾಡಿತ್ತು.