ಮಗುವೊಂದನ್ನು ದೂರದ ಊರಿನ ಶಾಲೆಗೆ ಶಿಕ್ಷಣಕ್ಕೆ ಕಳುಹಿಸುವಾಗ ತಾಯಿಗೆ ಆಗುವ ತೊಳಲಾಟ, ಸಂಕಟ, ವೇದನೆ, ಕಳುಹಿಸಬೇಕಾದ ಅನಿವಾರ್ಯವಿರುವ ತಂದೆಯಂತೆ ಹಿರಣ್ಯಕಶ್ಯಪು ಹಾಗೂ ಕಯಾದು ಕಂಡು ಬಂದದ್ದು ಸುಳ್ಳಲ್ಲ. ಇದೇ ಯಕ್ಷಗಾನದ ಶಕ್ತಿ.
ಉಡುಪಿ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಾಲಿಗ್ರಾಮ ಮೇಳದ ವತಿಯಿಂದ ಭಕ್ತ ಪ್ರಹ್ಲಾದ ಯಕ್ಷಗಾನ ನಡೆಯಿತು. ಹಿರಣ್ಯಕಶ್ಯಪುವಿನ ಹರಭಕ್ತಿ, ಹರಿವಿರೋಧ, ಕಯಾದುವಿನ ಪುತ್ರ ವ್ಯಾಮೋಹ, ಪತಿ ಭಕ್ತಿ ಇವೆರಡರ ಸಮ್ಮಿಳಿತದ ಅಭಿನಯ ಮೂಡಿಬಂದದ್ದು ಸಾಲಿಗ್ರಾಮ ಮೇಳದ ಭಕ್ತ ಪ್ರಹ್ಲಾದ ಯಕ್ಷಗಾನದಲ್ಲಿ. ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ವತಿಯಿಂದ ಸಾಲಿಗ್ರಾಮ ಮೇಳದವರು ಕಾಲಮಿತಿಯಲ್ಲಿ ಪ್ರದರ್ಶಿಸಿದ ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶ್ಯಪುವಾಗಿ ಮೆರೆದದ್ದು ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ಕಯಾದುವಾಗಿ ಭಾವಾಭಿವ್ಯಕ್ತಿ ಪ್ರದರ್ಶಿಸಿದ್ದು ಶಶಿಕಾಂತ್ ಶೆಟ್ಟಿ ಕಾರ್ಕಳ. ಗುರುಗಳಾಗಿ ನರಸಿಂಹ ಗಾಂವ್ಕರ್, ಪೆದ್ದ ಶಿಷ್ಯನಾಗಿ ಅರುಣ್ ಕುಮಾರ್ ಜಾರ್ಕಳ.
ಕಾಲಮಿತಿಯಲ್ಲೇ ಭಕ್ತ ಪ್ರಹ್ಲಾದ ಪ್ರಸಂಗದ ಜತೆಗೆ ಇದೇ ಕಥೆಯ ಮುಂದುವರಿದ ಭಾಗವಾದ ವಿರೋಚನ ಕಾಳಗ ಇನ್ನೊಂದು ಪ್ರಸಂಗವೂ ಇದ್ದ ಕಾರಣ ಪ್ರದರ್ಶನ ಸಮಯದೊಳಗೆ ಸೀಮಿತವಾಗಿತ್ತು.
ಹಿರಣ್ಯಕಶ್ಯಪುವಿನ ರಾಜ್ಯಭಾರ, ಪುತ್ರೋತ್ಸವದ ಸಂಭ್ರಮವನ್ನು, ರಾಜ ರಾಣಿಯರ ಮನೋಲ್ಲಾಸವನ್ನು ಪ್ರಸನ್ನ ಹಾಗೂ ಶಶಿಕಾಂತರು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟರು. ಪುತ್ರ ಸಂತಾನ ಪ್ರಾಪ್ತಿಯಾದಾಗ ಹೆಂಗರುಳಿನ ಮನೋಭಿವ್ಯಕ್ತಿ, ಪುರುಷರ ಮನಸ್ಥಿತಿ ಕುರಿತೂ ಇಬ್ಬರೂ ಸಂವಾದಿಗಳಾಗಿ ಮಾತುಗಳ ಮೂಲಕ ಅಭಿವ್ಯಕ್ತಿಗೈದರು. ಇಷ್ಟಾದ ಬಳಿಕ ಬಾಲಕ ಪ್ರಹ್ಲಾದನನ್ನು ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಡುವ ದೃಶ್ಯದಲ್ಲೂ ಒಬ್ಬ ಜವಾಬ್ದಾರಿಯುತ ತಂದೆಯಾಗಿ, ರಾಜ್ಯಭಾರ ಮಾಡುವ ಹೊಣೆ ಹೊತ್ತವ ಉತ್ತರಾಧಿಕಾರಿಯನ್ನು ತಯಾರು ಮಾಡುವವನಾಗಿ ಯೋಚಿಸುವ ಹಿರಣ್ಯಕಶ್ಯಪು ಹಾಗೂ ಒಂದಿರುಳೂ ಬಿಟ್ಟಿರಲಾರದೇ ಹಗಲೂ ರಾತ್ರಿ ಜತೆಗೇ ಜತನವಾಗಿ ಕಾಪಾಡಿಕೊಂಡು ಬಂದಿದ್ದ ಪುತ್ರರತ್ನನನ್ನು ಸಾಮಾನ್ಯರ ಜತೆಗೆ ಶಿಕ್ಷಣಕ್ಕಾಗಿ ಗುರುಕುಲಕ್ಕಾಗಿ ರಾಜಗುರುಗಳಾದ ಚಂಡಾಮರ್ಕರ ಜತೆ ಕಳುಹಿಸುವ ಸನ್ನಿವೇಶ ಭಾವನಾತ್ಮಕವಾಗಿ ಮೂಡಿ ಬಂತು. ಮಗುವೊಂದನ್ನು ದೂರದ ಊರಿನ ಶಾಲೆಗೆ ಶಿಕ್ಷಣಕ್ಕೆ ಕಳುಹಿಸುವಾಗ ತಾಯಿಗೆ ಆಗುವ ತೊಳಲಾಟ, ಸಂಕಟ, ವೇದನೆ, ಕಳುಹಿಸಬೇಕಾದ ಅನಿವಾರ್ಯವಿರುವ ತಂದೆಯಂತೆ ಹಿರಣ್ಯಕಶ್ಯಪು ಹಾಗೂ ಕಯಾದು ಕಂಡುಬಂದದ್ದು ಸುಳ್ಳಲ್ಲ. ಇದೇ ಯಕ್ಷಗಾನದ ಶಕ್ತಿ. ಅಲೌಕಿಕವನ್ನು ಲೌಕಿಕವಾಗಿಸಿದರೂ ಎಲ್ಲೂ ತೀರಾ ಸಣ್ಣಮಟ್ಟಕ್ಕೆ ಇಳಿಯದೇ ತಾಯಿ ತಂದೆಯ ಜವಾಬ್ದಾರಿ, ಮಕ್ಕಳ ಮೇಲಿನ ಪ್ರೀತಿಯನ್ನೇ ವಸ್ತುವಾಗಿಸಿ ಪುರಾಣಪಾತ್ರಗಳ ಮೂಲ ಅಭಿವ್ಯಕ್ತಿಗೊಳಿಸಿದ್ದು ಹೆಗ್ಗಳಿಕೆ. ಕೊನೆಗೂ ಒಬ್ಬ ಗೃಹಿಣಿಯಾಗಿ ಮಗನನ್ನು ಬೀಳ್ಕೊಡುವಾಗ ಕಯಾದುವಿನ ಕಣ್ಣಲ್ಲಿ ಬರುವ ಹನಿಗಳು ಪ್ರೇಕ್ಷಕರನ್ನು ಭಾವನಾ ಪ್ರಪಂಚದಲ್ಲಿ ತೇಲಿಸಿತು.
ಗುರುಕುಲದಲ್ಲಿ “ಪೆದ್ದಾ, ಎಲ್ಲಿದ್ದೀಯಪ್ಪಾ, ಓ ಇಲ್ಲಿದ್ದೀಯಾ’ ಎಂದು ಜನಗಳ ಮಧ್ಯದಿಂದ ಬಂದ ಪೆದ್ದ ಶಿಷ್ಯನಾಗಿ ಜಾರ್ಕಳ ಅವರು ಹಾಸ್ಯದ ಮೂಲಕ ರಂಜಿಸಿದರು. ಹರಿಭಕ್ತಿಯ ಪ್ರಹ್ಲಾದನನ್ನು ಹರಭಕ್ತನಾಗಿಸಲು ಆಗದ ಅಸಹಾಯಕ ಸ್ಥಿತಿಯ ಗುರುಗಳು, ವಿಚಾರ ತಿಳಿದು ಕ್ರುದ್ಧನಾಗುವ ಹಿರಣ್ಯಕಶ್ಯಪು, ಕಯಾದುವಿನ ಮೂಲಕ ವಿಷವುಣ್ಣಿಸಲು ಆದೇಶ ಮಾಡುವುದು, ಹೆತ್ತ ತಾಯಿಯೇ ಮಗನಿಗೆ ವಿಷಕೊಡುವ ಪರಿಸ್ಥಿತಿ ಬರುವುದು, ಅತ್ತ ಪತಿಯ ಆದೇಶ ಉಲ್ಲಂ ಸಲಾಗದೇ ಇತ್ತ ಮಗನಿಗೆ ವಿಷವಿಕ್ಕಲಾಗದೇ ಇರುವ ಕರುಳು ಹಿಂಡುವ ಸನ್ನಿವೇಶ ಶಶಿಕಾಂತರಿಂದ ಅದ್ಭುತವಾಗಿ ಮೂಡಿಬಂತು. ಸಮುದ್ರಕ್ಕೆ ದೂಡಿದರೂ, ಮದ್ದಾನೆಗಳಿಂದ ತುಳಿಸಿದರೂ, ಧಡಿಯರಂದ ಥಳಿಸಿದರೂ, ಬೆಟ್ಟದಿಂದ ದೂಡಿದರೂ ಬದುಕುಳಿಯುವ ಪ್ರಹ್ಲಾದ ಎಲ್ಲೆಲ್ಲೂ ಹರಿ ಇದ್ದಾನೆ ಎಂದು ಹೇಳಿ ಕಂಬದಿಂದ ಹೊರಬಂದ ನರಸಿಂಹನ ಮೂಲಕ ಹಿರಣ್ಯಕಶ್ಯಪುವನ್ನು ಒಳಗೂ ಅಲ್ಲದ ಹೊರಗೂ ಅಲ್ಲದ ನಡುಬಾಗಿಲ, ಮೇಲೂ ಅಲ್ಲದ ಕೆಳಗೂ ಅಲ್ಲದ ಹೊಸ್ತಿಲಿನಲ್ಲಿ ಕುಳಿತು, ನರನೂ ಅಲ್ಲದ ಮೃಗವೂ ಅಲ್ಲದ ನರಸಿಂಹನಾಗಿ, ಆಯುಧಗಳಿಂದ ಅಲ್ಲದ ಉಗುರಿನ ಮೂಲಕ ಹೊಟ್ಟೆ ಬಗೆದು ಹಿರಣ್ಯಕಶ್ಯಪುವಿನ ಸಂಹಾರದ ಮೂಲಕ ಮೋಕ್ಷ ಕೊಡಿಸುತ್ತಾನೆ. ಎಲ್ಲರಿಗೂ ತಿಳಿದಿರುವ ಕಥೆಯೇ ಆದರೂ ಪೌರಾಣಿಕ ಪಾತ್ರಗಳಲ್ಲಿ ಹೇಗೆ ಜನರಿಗೆ ಸಂದೇಶ ನೀಡಬಹುದು ಎಂದು ಪ್ರದರ್ಶಿಸುವ ಮೂಲಕ ಕಲಾವಿದರು ಮನಗೆದ್ದರು. ಇದಕ್ಕೆಲ್ಲ ಪೂರಕವಾಗಿ ಚಂದ್ರಕಾಂತ ಮೂಡುಬೆಳ್ಳೆ ಅವರ ಭಾಗವತಿಕೆಯ ಹಿಮ್ಮೇಳ ಒಟ್ಟು ಪ್ರಸಂಗದ ಮೇಲ್ಮೆಯನ್ನು ಎತ್ತರಿಸಿತು.
ಲಕ್ಷ್ಮೀ ಮಚ್ಚಿನ