Advertisement

730 ದಿನ ಅಹೋರಾತ್ರಿ ಸಾವಿರಾರು ಭಜನ ತಂಡಗಳಿಂದ ಭಜನೆ ಸೇವೆ !

02:48 PM Jan 13, 2018 | |

ಉಡುಪಿ: ಉಡುಪಿ ಶ್ರೀಕೃಷ್ಣನಿಗೆ ನಿತ್ಯ ಭಜನೆ ಸೇವೆಯ ಸಮರ್ಪಣೆ ಸಂಕಲ್ಪ ಪಲಿಮಾರು ಶ್ರೀಗಳ ಪರ್ಯಾಯದ ವಿಶಿಷ್ಟಗಳಲ್ಲೊಂದು. ಅದು ನಿತ್ಯ ನಿರಂತರ. ಪರ್ಯಾಯ ಪೀಠಾರೋಹಣ ಮಾಡಿದ ದಿನದಿಂದ ಪರ್ಯಾಯ ಪೀಠದಿಂದ ಕೆಳಗಿಳಿಯುವ ವರೆಗೆ ಪ್ರತಿನಿತ್ಯ ಹಗಲು ರಾತ್ರಿ ಭಜನೆಯ ನಿನಾದ ನಿರಂತರವಾಗಿ ಹೊರಹೊಮ್ಮಲಿದೆ. 

Advertisement

2,000ದಷ್ಟು ಭಜನ ತಂಡಗಳು
ತಿರುಪತಿ ಮತ್ತು ಮಂತ್ರಾಲಯದ ದಾಸಸಾಹಿತ್ಯ ಪ್ರಾಜೆಕ್ಟ್ ನೇತೃತ್ವದಲ್ಲಿ ನಿರಂತರ ಭಜನಾ ಕಾರ್ಯಕ್ರಮ ನೆರವೇರಲಿದೆ. ಮಂತ್ರಾಲಯದ ದಾಸಸಾಹಿತ್ಯ ಪ್ರಾಜೆಕ್ಟ್ ನಲ್ಲಿ 700ರಷ್ಟು ಮತ್ತು ತಿರುಪತಿಯ ತಿರುಮಲ ದಾಸಸಾಹಿತ್ಯ ಪ್ರಾಜೆಕ್ಟ್‌ನಡಿ 1,000ಕ್ಕೂ ಅಧಿಕ ಭಜನಾ ತಂಡಗಳು ನೋಂದಣಿಯಾಗಿವೆ. ಇವುಗಳ ಜತೆಗೆ ಇತರ ಭಜನಾ ತಂಡಗಳು ಕೂಡ ಈ ಅಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. 2,000ಕ್ಕೂ ಮಿಕ್ಕಿದ ಭಜನಾ ತಂಡಗಳು ಗಾಯನ ಲೋಕವೊಂದನ್ನು ಸೃಷ್ಟಿಸಲಿವೆ. 

ಕನಕಗೋಪುರ ಬಳಿ
ಆರಂಭದಲ್ಲಿ ಶ್ರೀಕೃಷ್ಣ ಮಠದ ಒಳಗೆ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಅಲ್ಲಿ ಭಕ್ತರ ಪ್ರಾರ್ಥನೆಗೆ ತೊಡಕಾಗಬಾರದು, ಭಜನೆ ಹಾಡುವವರಿಗೂ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕನಕನ ಕಿಂಡಿಯ ಸಮೀಪದ ಕನಕಗೋಪುರದ ಬಳಿ ಮಂಟಪ ನಿರ್ಮಾಣ ಮಾಡಿ ಅಲ್ಲಿ ಉತ್ತಮ ವೇದಿಕೆ ಒದಗಿಸಿಕೊಡಲು ತೀರ್ಮಾನಿಸಲಾಗಿದೆ. ಮಂಟಪ ನಿರ್ಮಾಣ ಕೆಲಸ ಆರಂಭವಾಗಿದೆ. ಹೊರಜಿಲ್ಲೆಗಳಿಂದ ಆಗಮಿಸುವ ಭಜನಾ ತಂಡಗಳಿಗೆ ವಸತಿ, ಆತಿಥ್ಯದ ವ್ಯವಸ್ಥೆ ಮಾಡಲಾಗುತ್ತದೆ.  

1,500ಕ್ಕೂ ಅಧಿಕ ದಾಸರ ಪದ
ಈ ಭಜನಾ ಕಾರ್ಯಕ್ರಮದಲ್ಲಿ ದಾಸ  ಪದಗಳನ್ನು ಹಾಡಲಾಗುವುದು. ಈಗಾಗಲೇ ಪದಗಳ ಕಿರುಪುಸ್ತಕಗಳನ್ನು ಕೂಡ ಮುದ್ರಿಸಿ ಭಜನಾ ಮಂಡಳಿಗಳಿಗೆ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ. ಒಟ್ಟಿನಲ್ಲಿ ಗಾನಲೋಲ ಗೋಪಾಲಕೃಷ್ಣನಿಗೆ ಭಜನೆ ಸೇವೆ ಸಮರ್ಪಣೆಯಾಗುವ ಮೂಲಕ ಹೊಸದೊಂದು ಇತಿಹಾಸ ಸೃಷ್ಟಿಯಾಗುವ ಜತೆಗೆ ಭಕ್ತ ಜನರನ್ನು ಭಕ್ತಿರಸದ ಹೊನಲಲ್ಲಿ ತೇಲಾಡಿಸಲಿದೆ.

ಮಹಿಳೆ-ಪುರುಷ ಭೇದವಿಲ್ಲ
ಮಹಿಳೆಯರು, ಪುರುಷರು ಯಾರು ಬೇಕಾದರೂ ಭಜನೆ ಸೇವೆ ಸಲ್ಲಿಸಬಹುದು. ಆದರೆ ನಿರಂತರವಾಗಿ ಭಜನೆ ನಡೆಯುವಂತೆ ನೋಡಿಕೊಳ್ಳಲಾಗುವುದು. ಎಲ್ಲಾ ತಂಡಗಳಿಗೂ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಲಾಗುವುದು. ಅಗತ್ಯ ಬಿದ್ದರೆ ತರಬೇತಿ ಕೂಡ ನೀಡಲಾಗುವುದು. ಭಜನಾ ಒಕ್ಕೂಟಗಳು, ಸಂಘಟನೆಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ನೋಂದಾಯಿತ ಭಜನಾ ಮಂಡಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ತಂಡದಲ್ಲಿ 2-3 ಮಂದಿ ಮಾತ್ರ ಭಜನೆ ಹಾಡುವವರಿದ್ದರೆ ಅವರ ಜತೆಗೆ ಇತರರನ್ನು ಕೂಡ ಸೇರಿಸಿ ಸಾಮೂಹಿಕ ಭಜನೆ ನಡೆಯುವಂತೆ ನೋಡಿಕೊಳ್ಳಲಾಗುವುದು. ಇದು ಸಾಮೂಹಿಕ, ನಿರಂತರ ಭಜನಾ ಸೇವೆ ಆಗಿರುತ್ತದೆ ಎಂದು ಪಲಿಮಾರು ಮಠದ ಪ್ರಹ್ಲಾದ ರಾವ್‌ ತಿಳಿಸಿದ್ದಾರೆ. 

Advertisement

ವಿಶೇಷ ಸೇವಾ ಕಾರ್ಯಕ್ರಮ
ಪರ್ಯಾಯ ಸಮಿತಿಯವರು ಭಜನಾ ಮಂಡಳಿಗಳ ಒಕ್ಕೂಟದ ಜತೆಗೂ ಮಾತುಕತೆ ನಡೆಸಿದ್ದಾರೆ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಒಕ್ಕೂಟದಲ್ಲಿ 1,000ಕ್ಕೂ ಅಧಿಕ ಮಂಡಳಿಗಳಿವೆ. ದಾಸ ಸಾಹಿತ್ಯ ಪ್ರಾಜೆಕ್ಟ್‌ನಲ್ಲಿ ನೋಂದಣಿಯಾದ ಮಂಡಳಿಗಳೂ ಇವೆ. ಭಜನಾ ಮಂಡಳಿಗಳಿಗೆ ಇದೊಂದು ವಿಶೇಷ ಕಾರ್ಯಕ್ರಮವಾಗಲಿದೆ.
ಎ. ಶಿವಕುಮಾರ್‌ ಅಂಬಲಪಾಡಿ,  ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next