ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಶರ್ಮಾ ಅವರೊಂದಿಗೆ ಇತ್ತೀಚೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಲಾದ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಮೂವರಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ನಗರದ ಆಲ್ಬರ್ಟ್ ಹಾಲ್ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ, ಹಲವಾರು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.
ಶರ್ಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರಾ ರಾಜೆ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: A Plan ವಿಫಲವಾಗಿದ್ರೆ…B ಪ್ಲ್ಯಾನ್ ರೆಡಿಯಾಗಿತ್ತು: ಮಾಸ್ಟರ್ ಮೈಂಡ್ ಝಾ ಮಾಹಿತಿ!