ಮಂಗಳೂರು: ಘನತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವನ್ನು ತಿಳಿಸಿ ಅರಿವು ಮೂಡಿಸಲು ಮಂಗಳೂರು ಪಾಲಿಕೆಯಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವತ್ಛ ಭಾರತ್ 2.0ದಡಿ ಐಇಸಿ ಚಟುವಟಿಕೆಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವಶನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ/ನಿರ್ವಹಣೆಗೆ ಸಂಬಂಧಪಟ್ಟಂತೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಪಚ್ಚನಾಡಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ತ್ಯಾಜ್ಯ ನೀರು ಮಳವೂರು ನೀರಿನ ಅಣೆಕಟ್ಟಿಗೆ ಸೇರುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಚ್ಚನಾಡಿ ಘನತ್ಯಾಜ್ಯ ಕಾಂಪೋಸ್ಟ್ ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು (ಲಿಚೇಟ್) 50 ಕೆಎಲ್‌ಡಿ ಸಾಮರ್ಥ್ಯದಲ್ಲಿ ಲಿಚೇಟ್ ಶುದ್ದೀಕರಣ ಘಟಕದ ಮೂಲಕ ಸಂಸ್ಕರಿಸಲಾಗುತ್ತಿದೆ. ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ (ನೆಲಭರ್ತಿ) ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಈಗಾಗಲೇ ನಿರ್ಮಿಸಲಾಗಿರುವ ಸಂಗ್ರಹಣ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಪಚ್ಚನಾಡಿಯ ಲಿಚೇಟ್ ಶುದ್ದೀಕರಣ ಘಟಕದಲ್ಲಿ ಹಾಗೂ ಪಾಲಿಕೆಯ ಎಸ್‌ಟಿಪಿ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.