ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಶಾಸಕ ಭೈರತಿ ಬಸವರಾಜ್ ಅವರು ಕೆ.ಆರ್.ಪುರಂ ಕ್ಷೇತ್ರದಲ್ಲಿ 102 ಕೊಲೆ ಮಾಡಿಸಿದ್ದಾರೆ ಎಂದು ಮಾಜಿ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಆರ್‌ಟಿಐ ದಾಖಲೆಗಳೊಂದಿಗೆ ಆರೋಪ ಮಾಡಿರುವ ರೆಡ್ಡಿ ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡಿದರು.
‘ಕೃಷ್ಣರಾಜಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ 102 ಕೊಲೆಗಳಾಗಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ. ಕೊಲೆಗಳಲ್ಲಿ ಶಾಸಕರ ಬೆಂಬಲಿಗರ ಕೈವಾಡ ಇದೆ. ಕಾನೂನು ಸುವ್ಯವಸ್ಥೆ ಸರಿ ಇದೆ ಎಂದು ಸಿಎಂ ಹೇಳುತ್ತಿದ್ದಾರೆ. 102 ಮರ್ಡರ್ ಆಗಿವೆ ಇದಕ್ಕೆ ನಿಮ್ಮ ಉತ್ತರವೇನು’ ಎಂದು ಪ್ರಶ್ನಿಸಿದರು.
’58 ಅತ್ಯಾಚಾರ ಪ್ರಕರರಗಳು ಕ್ಷೇತ್ರ ವ್ಯಾಪ್ತಿಯಲ್ಲಿ ದಾಖಲಾಗಿದ್ದು 158 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಾನೂನು ಸುವ್ಯವಸ್ಥೆಯನ್ನು ಶಾಸಕ ಭೈರತಿ ಬಸವರಾಜ್ ಅವರು ಸಂಪೂರ್ಣವಾಗಿ ಹದಗೆಡಿಸಿದ್ದಾರೆ’ ಎಂದು ಆರೋಪಿಸಿದರು.
‘ಪ್ರಧಾನ ಮಂತ್ರಿಗಳು 10 % ಸರ್ಕಾರ ಎಂದು ಆರೋಪಿಸಿರುವುದು ಇಲ್ಲಿ ಅನ್ವಯವಾಗುತ್ತದೆ. 1300 ಕೋ ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನುತ್ತಾರೆ, ಇದರಲ್ಲಿ ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿದ್ದಾರೆ’ ಎಂದು ಆರೋಪಿಸಿದರು.
ಎಫ್ಐಆರ್ ದಾಖಲಾಗಿದೆಯಾ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಭೈರತಿ ಬಸವರಾಜ್ ‘ನನ್ನ ಮೇಲೆ ಯಾವುದಾದರೂ ಎಫ್ಐಆರ್ ದಾಖಲಾಗಿದೆಯಾ ? ರಾಜಕೀಯ ಉದ್ದೇಶಕ್ಕೆ ವಿನಾ ಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ’ ಎಂದರು.
‘ನಾನು ಭ್ರಷ್ಟಾಚಾರ ಮಾಡಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ’ ಎಂದು ಸವಾಲು ಎಸೆದರು.