ಮೈಸೂರು: ತಮ್ಮ ಅನುಭವ, ಸಂವೇದನೆಯನ್ನು ಸಾಹಿತ್ಯ ಕೃತಿಯಲ್ಲಿ ಕಟ್ಟಿಕೊಡುವಲ್ಲಿ ಭೈರಪ್ಪ ಅವರು ಮೇಲುಗೈ ಸಾಧಿಸಿರುವುದರಿಂದ ಓದುಗರಿಗೆ ಹತ್ತಿರವಾಗಿದ್ದಾರೆ ಎಂದು ರಾಜಸ್ಥಾನದ ನಾಟಕಕಾರ ನಂದಕಿಶೋರ್ ಆಚಾರ್ಯ ಪ್ರಶಂಸಿಸಿದರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಅವರು ಮಾತನಾಡಿದರು. ಸೃಜನಶೀಲ ಬರವಣಿಗೆ ಮೂಲಕ ಎಸ್.ಎಲ್.ಭೈರಪ್ಪ, ಕನ್ನಡಕಷ್ಟೇ ಅಲ್ಲ, ಆಧುನಿಕ ಭಾರತದಲ್ಲೇ ಅವರೊಬ್ಬ ಅಪ್ರತಿಮ ಸಾಹಿತಿಯಾಗಿದ್ದಾರೆ.
ಅವರೊಬ್ಬ ಸ್ವಯಂ ಅನ್ವೇಷಕರು ಎಂದು ಬಣ್ಣಿಸಿದರು. ಅಕ್ಷರ ಕೃಷಿ ಕೂಡ ಸ್ವಯಂ ಅನ್ವೇಷಣೆಯ ಮತ್ತೂಂದು ಪ್ರಕ್ರಿಯೆ. ಇದು ಮನುಷ್ಯನ ಆತ್ಮ ಸಂಶೋಧನೆಗೆ ದಾರಿ ಮಾಡಿಕೊಡಲಿದೆ. ಹೀಗಾಗಿ, ಸಾಹಿತಿಗಳು ಅನುಭವ, ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಡಬೇಕು. ಇದರಲ್ಲಿ ಭೈರಪ್ಪ ಅವರು ಮೇಲುಗೈ ಸಾಧಿಸಿದ್ದಾರೆ ಎಂದರು.
ಜಾತಿಯ ಅಸಮಾನತೆ, ಧರ್ಮ ಸಂಘರ್ಷ, ವರದಕ್ಷಿಣೆ… ಮತ್ತಿತರೆ ಸಾಮಾಜಿಕ ಸಮಸ್ಯೆಗಳ ಕುರಿತು ಹಿಂದಿ ಭಾಷಾ ಸಾಹಿತ್ಯದಲ್ಲಿ ಕೃತಿಗಳು ಬರುತ್ತಿಲ್ಲ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಮೇಲೆಯೂ ಬೆಳಕು ಚೆಲುತ್ತಿಲ್ಲ.
ಆದರೆ, ಭೈರಪ್ಪ ಅವರು ಸಮಾಜದ ಮೂಲ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿ ಉತ್ಕೃಷ್ಟ ಸಾಹಿತ್ಯವನ್ನು ರಚಿಸಿದ್ದಾರೆ. ಇದರಿಂದಲೇ ಅವರ ಕೃತಿಗಳು ದೇಶದ ಎಲ್ಲ ಭಾಷೆಗಳಿಗೂ ಅನುವಾದಗೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.