ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸೇರಿ ಹಲವು ನಾಯಕರು ಬಿಜೆಪಿ ವಿರುದ್ದ ಹೇಳಿಕೆ ನೀಡಿದ್ದಾರೆ. ಮೋಹನ್ ಭಾಗ್ವತ್ ಅವರ ‘ನಿಜವಾದ ಸೇವಕ ಅಹಂನಿಂದ ಕೆಲಸ ಮಾಡುವುದಿಲ್ಲ’ ಎಂಬ ಹೇಳಿಕೆ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಹೀಗಾಗಿ ಬಿಜೆಪಿ ಮತ್ತು ಆರ್ ಎಸ್ಎಸ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು.
ಇದೀಗ ಆರ್ ಎಸ್ಎಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆರೆಸ್ಸೆಸ್ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದು, ಸಂಘ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಬಿಜೆಪಿ ನಡುವೆ “ಯಾವುದೇ ಬಿರುಕು ಇಲ್ಲ” ಎಂದು ಹೇಳಿದರು. ಅಂತಹ ಕಾಮೆಂಟ್ ಗಳು ಊಹಾಪೋಹ ಎಂದಿದ್ದಾರೆ.
ಭಾಗ್ವತ್ ಅವರ ಹೇಳಿಕೆಗಳು ಕೇಸರಿ ಪಕ್ಷದ ನಾಯಕತ್ವ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಪ್ರತಿಪಕ್ಷ ನಾಯಕರು ಸೇರಿದಂತೆ ಒಂದು ವರ್ಗದ ಜನರ ಪ್ರತಿಪಾದನೆಯ ನಡುವೆ ಸಂಘ ಈ ಸ್ಪಷ್ಟನೆ ನೀಡಿದೆ.
ಕಳೆದ ಸೋಮವಾರ ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗ್ವತ್ ಅವರು, ನಿಜವಾದ ಸೇವಕ ಘನತೆಯಿಂದ ಕೆಲಸ ಮಾಡುತ್ತಾನೆ. ಅವನು ತಾನೇ ಕೆಲಸ ಮಾಡಿದೆ ಎಂಬ ಹೊಂದಿರುವುದಿಲ್ಲ. ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಹೇಳಬಹುದು ಎಂದಿದ್ದರು.
“ಭಾಗ್ವತ್ ಅವರು 2014 ಮತ್ತು 2019ರ ಲೋಕಸಭಾ ಚುನಾವಣೆಯ ಬಳಿಕ ಮಾಡಿದ ಭಾಷಣಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಯಾವುದೇ ಭಾಷಣವು ರಾಷ್ಟ್ರೀಯ ಚುನಾವಣೆಗಳಂತೆ ಪ್ರಮುಖವಾದ ಘಟನೆಯನ್ನು ಉಲ್ಲೇಖಿಸಲು ಬದ್ಧವಾಗಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಗೊಂದಲ ಉಂಟು ಮಾಡುವ ಉದ್ದೇಶದಿಂದ ತಿರುಚಲಾಗಿದೆ. ಅವರ ‘ಅಹಂ’ ಹೇಳಿಕೆಯು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ನೀಡಲಾಗಿಲ್ಲ” ಎಂದು ಸಂಘ ಸ್ಪಷ್ಟನೆ ನೀಡಿದೆ.