Advertisement

ಭಾಗವತ್‌ ಹೇಳಿಕೆಗೆ ಆರ್‌ಎಸ್‌ಎಸ್‌ ಸ್ಪಷ್ಟನೆ

08:15 AM Feb 13, 2018 | Team Udayavani |

ನವದೆಹಲಿ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಭಾರತೀಯ ಸೇನೆಯ ಬಗ್ಗೆ ಭಾನುವಾರ ನೀಡಿದ್ದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೆಸ್ಸೆಸ್‌, “ಭಾಗವತ್‌ರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಹೇಳಿದೆ.

Advertisement

“”ಗಡಿಯಲ್ಲಿ ಯುದ್ಧ ಏರ್ಪಟ್ಟರೆ, ದೇಶದ ಪ್ರತಿಯೊಬ್ಬ ನಾಗರಿಕ ಒಬ್ಬ ಯೋಧನಂತೆ ಸಜ್ಜುಗೊಂಡು ಸೈನಿಕರಿಗೆ ನೆರವಾಗಬೇಕು. ಅಂಥ ಸಂದರ್ಭಗಳಲ್ಲಿ, ಜನ ಸಾಮಾನ್ಯರನ್ನು ಸೈನಿಕರಂತೆ ಹುರಿಗೊಳಿಸಲು ಸೈನ್ಯಕ್ಕೆ 6 ತಿಂಗಳು ಬೇಕಾದರೆ, ಆರೆಸ್ಸೆಸ್‌ ಕಾರ್ಯಕರ್ತರಿಗೆ ಕೇವಲ 3 ದಿನ ಸಾಕು. ಸ್ವಯಂ ಸೇವಕರು, ನಿತ್ಯವೂ ನಿಯಮಿತ ಅಭ್ಯಾಸಗಳಿಂದ ಶಿಸ್ತನ್ನು ಮೊದಲೇ ಮೈಗೂಡಿಸಿ ಕೊಂಡಿರುವುದರಿಂದ ಇದು ಬೇಗನೇ ಸಾಧ್ಯವಾಗುತ್ತದೆ ಎಂಬುದನ್ನು ಹೇಳಲು ಭಾಗವತ್‌ ಪ್ರಯತ್ನಿಸಿದ್ದಾರೆ” ಎಂದು ಆರೆಸ್ಸೆಸ್‌ ತಿಳಿಸಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್‌ ರಿಜಿಜು ಸಹ ಟ್ವಿಟರ್‌ನಲ್ಲಿ ಆರೆಸ್ಸೆಸ್‌ ಸ್ಪಷ್ಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಭಾಗವತ್‌ ಹೇಳಿಕೆಯು ಪ್ರತಿಪಕ್ಷ ಗಳನ್ನು ಕೆರಳಿಸಿದ್ದು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “”ಇಂಥ ಹೇಳಿಕೆ ನೀಡುವ ಮೂಲಕ ಭಾಗವತ್‌ ಅವರು ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟ ಹುತಾತ್ಮರಿಗೆ ಹಾಗೂ ಸಮಸ್ತ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ. ಸೈನಿಕರಿಗೆ ಅಪಮಾನ ಮಾಡಿದರೆ ಅದು ರಾಷ್ಟ್ರ ಧ್ವಜಕ್ಕೂ ಅಪಮಾನ ಮಾಡಿದಂತೆ. ಹಾಗಾಗಿ, ಕೂಡಲೇ ಭಾಗವತ್‌ ಸೇನೆಯ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ. 

ಕಾಂಗ್ರೆಸ್‌ ವಕ್ತಾರ ಆನಂದ್‌ ಶರ್ಮಾ, “”ಭಾಗವತ್‌ ಅವರ ಹೇಳಿಕೆ ತಲ್ಲಣಗೊಳಿಸು ವಂಥದ್ದು, ಆಫ‌^ನ್‌, ಸಿರಿಯಾ, ಇರಾಕ್‌, ಸೊಮಾಲಿಯಾ, ಕಾಂಗೋ ರಾಷ್ಟ್ರಗಳು ತಮ್ಮ ಅಧಿಕೃತ ಸೇನೆಗಳ ಬದಲಿಗೆ ಖಾಸಗಿ ಸೇನೆಗಳನ್ನು ಬಳಸಿ ಅಧಃಪತನ ಕಂಡಿವೆ. ಅಂಥ ಪರಿಸ್ಥಿತಿ ಭಾರತದಲ್ಲಿ ಉದ್ಭವವಾಗಲು ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ. 

ಭಾಗವತ್‌ ಹೇಳಿದ್ದೇನು?
ಬಿಹಾರದ ಮುಜಫ‌ರ್‌ಪುರದಲ್ಲಿ ಭಾನುವಾರ ನಡೆದಿದ್ದ ಆರೆಸ್ಸೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಭಾಗವತ್‌, “”ಗಡಿ ಭಾಗದಲ್ಲಿ ಯುದ್ಧ ಸನ್ನಿವೇಶ ಏರ್ಪಟ್ಟರೆ ಆರೆಸ್ಸೆಸ್‌ ಕೇವಲ ಮೂರೇ ದಿನಗಳಲ್ಲಿ ಯುದ್ಧಕ್ಕೆ ಸೈನಿಕರನ್ನು ಸಿದ್ಧಗೊಳಿಸುತ್ತದೆೆ. ಆದರೆ, ಭಾರತೀಯ ಸೇನೆಗೆ ಯುದ್ಧಕ್ಕೆ ಸಿದ್ಧವಾಗಬೇಕಾದರೆ ಆರು ತಿಂಗಳೇ ಬೇಕಾಗುತ್ತದೆ. ಈ ದೇಶದ ಸಂವಿಧಾನ ನಮಗೆ (ಆರೆಸ್ಸೆಸ್‌) ಅವಕಾಶ ಕೊಟ್ಟರೆ, ಭಾರತೀಯ ಸೇನೆಯ ನೇತೃತ್ವ ವಹಿಸಿಕೊಳ್ಳಲು ನಾವು ಸಿದ್ಧ” ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next