Advertisement

ಕರಾವಳಿಗೆ ಕೊಂಕಣ ರೈಲು ಸೀಬರ್ಡ್‌ ತಂದ ಭಗೀರಥ

12:30 AM Jan 30, 2019 | |

ಹೊನ್ನಾವರ: ಬ್ರಿಟಿಷರ ಕಾಲದಲ್ಲಿ ಅಸಾಧ್ಯವೆಂದು ಕೈಬಿಟ್ಟಿದ್ದ ಕೊಂಕಣ ರೈಲು ಮಾರ್ಗವನ್ನು ಟಿ.ಎ. ಪೈ ಅವರು ಪ್ರಸ್ತಾಪಿಸಿದ್ದರು. ಕಾಂಗ್ರೆಸ್‌ ಕಾಲದಲ್ಲಿ ಬೇಡಿಕೆ ಇತ್ತು. ಜಾರ್ಜ್‌ ಫೆರ್ನಾಂಡಿಸ್‌, ಮಧು ದಂಡವತೆ, ರಾಮಕೃಷ್ಣ ಹೆಗಡೆ ಕಾಲದಲ್ಲಿ ಕೊಂಕಣ ರೈಲ್ವೆ ಯೋಜನೆ ಆರಂಭವಾಯಿತು ಎಂಬುದು ಸತ್ಯ. ಸೀಬರ್ಡ್‌ ಯೋಜನೆ ಕೂಡ ಕಾಂಗ್ರೆಸ್‌ ಕಾಲದಲ್ಲಿ ಆರಂಭವಾದದ್ದು, ಬಿಜೆಪಿ ಯುಗದಲ್ಲಿ ಮುಂದುವರಿದಿದ್ದು. ಆದರೆ ಈ ಎರಡೂ ಯೋಜನೆ ಆರಂಭವಾಗುವ ಮೊದಲೇ ಕೈ ಬಿಡುವ ಪರಿಸ್ಥಿತಿ ಬಂದಾಗ ಇವುಗಳನ್ನು ಧರೆಗಿಳಿಸಿದ ಕೀರ್ತಿ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಸಲ್ಲುತ್ತದೆ.

Advertisement

ಕೊಂಕಣ ರೈಲ್ವೆ ಕಾಮಗಾರಿ ಆರಂಭವಾದ ಮೇಲೆ ಕೇಂದ್ರ ಸರ್ಕಾರ ಬದಲಾಯಿತು. ಈ ಯೋಜನೆ ಕಾರ್ಯಸಾಧುವಲ್ಲ, ನೈಸರ್ಗಿಕ ಕಾರಣಗಳಿಗಾಗಿ ಯೋಜನೆ ವಿಳಂಬವಾಗಿ ವೆಚ್ಚ ಅಗಾಧ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಯೋಜನೆ ಕೈಬಿಡಲು ಆಗಿನ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿತ್ತು. ಇದರಿಂದ ಕೆಂಡಾಮಂಡಲರಾದ ಜಾರ್ಜ್‌ ಫೆರ್ನಾಂಡಿಸ್‌ ಆಗ ಅಧಿಕಾರದಲ್ಲಿ ಇರಲಿಲ್ಲ. ಮುಂಬೈನಿಂದ ಕೇರಳದವರೆಗೆ ಕಾರಿನಲ್ಲಿಯೇ ಓಡಾಡಿ, ಕಾರವಾರ, ಕುಮಟಾ, ಹೊನ್ನಾವರದಲ್ಲಿ ಭಾಷಣ ಮಾಡಿ ಜನರನ್ನು ಜಾಗೃತಿಗೊಳಿಸಿದರು. ಯೋಜನೆ ತಡೆದರೆ ಕರಾವಳಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಕೇಂದ್ರವನ್ನು ಎಚ್ಚರಿಸಿದರು. ಜನರನ್ನು ಸಂಘಟಿಸುವುದರ ಜತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಕದನಕ್ಕಿಳಿದರು. ಕೊನೆಗೆ ಕರ್ನಾಟಕದ ಜಾಫರ್‌ ಶರೀಫ್‌ ರೈಲ್ವೆ ಮಂತ್ರಿಗಳಾದಾಗ ಅವರ ಮೇಲೆ ಒತ್ತಡ ಹೇರಿ ಕೊನೆಗೂ ರೈಲ್ವೆ ಕಾಮಗಾರಿ ನಡೆಯುವಂತೆ ನೋಡಿಕೊಂಡರು ಜಾರ್ಜ್‌.

‘ಭಾರತೀಯ ರೈಲ್ವೆಯಿಂದ ಅತ್ಯುತ್ತಮ ಅಧಿಕಾರಿಗಳನ್ನು ಆಯ್ಕೆ ಮಾಡಿ ಕೊಂಕಣ ರೈಲ್ವೆ ನಿಗಮಕ್ಕೆ ಸೇರಿಸಿಕೊಂಡಿದ್ದೇನೆ. ಅವರೆಲ್ಲಾ ಪ್ರಾಮಾಣಿಕ ದುಡಿಮೆ, ಅಸಾಧ್ಯವನ್ನು ಸಾಧಿಸಲು ಸಾಮರ್ಥ್ಯವುಳ್ಳವರು. ನಿಗದಿತ ಸಮಯಕ್ಕೆ ಕೊಂಕಣ ರೈಲ್ವೆ ಓಡಿಯೇ ಓಡುತ್ತದೆ’ ಅಂದಿದ್ದರು ಜಾರ್ಜ್‌ ಫೆರ್ನಾಂಡಿಸ್‌. ಅವರ ಹೇಳಿಕೆಯಂತೆ ಶ್ರೀಧರನ್‌ ಕೊಂಕಣ ರೈಲ್ವೆ ಮುಗಿಸಿದ್ದು ಮಾತ್ರವಲ್ಲ ದೆಹಲಿ, ಬೆಂಗಳೂರು ಮೆಟ್ರೋ ರೈಲಿಗೂ ಮಾರ್ಗದರ್ಶಕರಾದರು. ಜಿಲ್ಲೆಗೆ ಬಂದ ಇತರ ಎಲ್ಲ ಯೋಜನೆಗಳು ಜನರನ್ನು ಗೋಳಿಗೆ ಕೆಡವಿದರೆ ಕೊಂಕಣ ರೈಲ್ವೆ ಮಾತ್ರ ಭೂಮಿ ಕಳೆದುಕೊಂಡ ಎಲ್ಲರಿಗೂ ಪರಿಹಾರ ಕೊಟ್ಟಿದೆ. ಅವರ ಕುಟುಂಬಕ್ಕೊಂದು ಉದ್ಯೋಗ ಕೊಟ್ಟಿದೆ. ಇದಕ್ಕೆ ಜಾರ್ಜ್‌ ಆಯ್ಕೆಮಾಡಿದ ಶ್ರೀಧರನ್‌ ಕಾರಣ.

ನೌಕಾ’ನೆಲೆ’ ಒದಗಿಸಿದ ನಾಯಕ: ಏಷ್ಯಾದಲ್ಲಿಯೇ ದೊಡ್ಡ ನೌಕಾನೆಲೆ ಸೀಬರ್ಡ್‌ ಮಂಜೂರಾಗಿ ಅಡಿಗಲ್ಲು ಸಮಾರಂಭ ನೆರವೇರಿತ್ತು. ಭೂಮಿ ಬಿಟ್ಟು ಕೊಡಲು ರೈತರು ಮಾತ್ರವಲ್ಲ ಕರ್ನಾಟಕ ಸರ್ಕಾರವೂ ಒಪ್ಪಿರಲಿಲ್ಲ. ಪರಿಹಾರದ ಮೊತ್ತವನ್ನು ರಕ್ಷಣಾ ಇಲಾಖೆ ಕೊಡಬೇಕೋ, ರಾಜ್ಯ ಸರ್ಕಾರ ಕೊಡಬೇಕೋ ಎಂಬುದು ಚರ್ಚೆಯ ವಿಷಯವಲ್ಲವಾದರೂ ಇದರ ಹಿಂದೆ ರಾಜಕಾರಣ ಇತ್ತು. ನೌಕಾನೆಲೆ ಬಂದರೆ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ, ಅಭಿವೃದ್ಧಿಯಾಗುತ್ತದೆ ಎಂಬುದು ಕೇಂದ್ರದ ವಾದವಾಗಿತ್ತು. ನಮಗೆ ಆ ಅಭಿವೃದ್ಧಿ ಬೇಕಾಗಿಲ್ಲ ಎಂದು ಕರ್ನಾಟಕ ಹೇಳಿತ್ತು. ಅದೇ ವೇಳೆ ಆಂಧ್ರ ರಾಜ್ಯ ನೌಕಾನೆಲೆ ಸ್ವಾಗತಿಸಲು ಸಿದ್ಧವಾಗಿತ್ತು. ಆಗ ಜಾರ್ಜ್‌ ಫೆರ್ನಾಂಡಿಸ್‌ ರಕ್ಷಣಾ ಮಂತ್ರಿಗಳಾದರು. ಕರ್ನಾಟಕದ ಕೈತಪ್ಪಿ ಹೋಗಲಿರುವ ನೌಕಾನೆಲೆಯ ಅಗತ್ಯವನ್ನು ತಿಳಿಸಿ ಹೇಳಲು ಮತ್ತೆ ಉ.ಕ., ಕರಾವಳಿಗೆ ಬಂದರು. ಜೆ.ಎಚ್. ಪಟೇಲ್‌ ಮುಖ್ಯಮಂತ್ರಿಗಳಾಗಿದ್ದರು. ಸಾರ್ವಜನಿಕರ ಎದುರು ನೌಕಾನೆಲೆಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಜಾರ್ಜ್‌ ವಿವರಿಸಿದರು. ಈ ಯೋಜನೆ ಅಗತ್ಯ ಕುರಿತು ಹೇಳಿ ಜನರ ಮನವೊಲಿಸಿದರು.

ಜೀಯು, ಹೊನ್ನಾವರ

Advertisement
Advertisement

Udayavani is now on Telegram. Click here to join our channel and stay updated with the latest news.

Next