Advertisement

ಭಗವತಿ ಅಮ್ಮನ ದೇವಸ್ಥಾನ; ನವರಾತ್ರಿಯಲ್ಲಿ ಮುಸ್ಲಿಂ ಕುಟುಂಬದಿಂದ ಮೊದಲ ಪೂಜೆ!

04:14 PM Oct 13, 2021 | Team Udayavani |

ಸಾಗರ: ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಇಲ್ಲಿನ ಶ್ರೀರಾಂಪುರ ಬಡಾವಣೆಯಲ್ಲಿನ ಭಗವತಿ ಅಮ್ಮನವರ ದೇವಸ್ಥಾನವನ್ನು ಸ್ಥಾಪಿಸಿದ್ದಲ್ಲದೆ ಕಾಲಾನಂತರ ಇಂದಿಗೂ ಅವರ ಕುಟುಂಬದವರು ನವರಾತ್ರಿ ಸಂದರ್ಭದಲ್ಲಿ ಶ್ರೀದೇವಿಗೆ ಮೊದಲ ಪೂಜೆ ಸಲ್ಲಿಸುವ ಪದ್ಧತಿ ಪಾಲಿಸಿಕೊಂಡು ಬಂದಿರುವುದು ಸಾಗರದ ವೈಶಿಷ್ಟ್ಯವಾಗಿ ದಾಖಲಾಗಿದೆ.

Advertisement

ಸುಮಾರು 50 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದ  ಇಬ್ರಾಹಿಂ ಷರೀಫ್ ಎಂಬುವವರಿಗೆ ಕನಸಿನಲ್ಲಿ ದೇವಿ ಆಕೃತಿ ಕಾಣಿಸಿಕೊಂಡಿದ್ದರಿಂದ ಭಗವತಿ ಅಮ್ಮನವರ ದೇವಸ್ಥಾನ ಸ್ಥಾಪಿಸಿ, ಆರಾಧನೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ಥಳಾವಕಾಶ ನೀಡುವಲ್ಲಿ ರೈಲ್ವೆ ಅಧಿಕಾರಿಗಳು ಸಹಕಾರ ನೀಡಿರಲಿಲ್ಲ. ಆದರೂ ಇಬ್ರಾಹಿಂ ಪಟ್ಟು ಹಿಡಿದು, ದೇವಾಲಯದ ಅಭಿವೃದ್ಧಿ ಕಾರ‍್ಯ ಮಾಡಿದ್ದರು. ಸ್ವಧರ್ಮ ಪಾಲನೆಯ ಜತೆಗೆ ಶ್ರೀದೇವಿಯ ಆರಾಧಕರಾಗಿ ಧಾರ್ಮಿಕ ಆಚರಣೆಗಳನ್ನು ಇಬ್ರಾಹಿಂ ನಡೆಸಿಕೊಂಡಿದ್ದರು.

ಇಬ್ರಾಹಿಂ ಅವರ ನಿಧನಾನಂತರ ಅವರ ಪುತ್ರ ಬುಡೇನ್ ಸಾಬ್ ಮತ್ತು ಕುಟುಂಬದವರು ದೇವಸ್ಥಾನದ ವ್ಯವಸ್ಥಾಪನೆಗಾಗಿ ಸಮಿತಿಯೊಂದರ ರಚನೆಗೆ ಸಹಕಾರ ನೀಡಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಧರ್ಮದರ್ಶಿಗಳ ಸೂಚನೆಯ ಮೇರೆಗೆ ಸಮಿತಿ ರಚನೆಯಾಗಿದ್ದು, ದೇವಸ್ಥಾನ ಉಸ್ತುವಾರಿ ನಿರ್ವಹಿಸುತ್ತಿದೆ. ಆದರೆ ನವರಾತ್ರಿ ಸಂದರ್ಭದಲ್ಲಿ ಇಬ್ರಾಹಿಂ ಷರೀಫ್ ಅವರ ಕುಟುಂಬದವರು ಬಂದು ಸೇವೆ ಸಲ್ಲಿಸಿ, ಪ್ರಸಾದ ಸ್ವೀಕರಿಸುವ ಪದ್ಧತಿ ಕೈ ಬಿಡಲಿಲ್ಲ. ಈ ಬಾರಿ ಸಹ ಷರೀಫ್ ಅವರ ಪುತ್ರ ಬುಡೇನ್ ಸಾಬ್, ಫಾಮಿದಾ ಮುಂತಾದವರು ದೇವಸ್ಥಾನಕ್ಕೆ ಭೇಟಿ ನೀಡಿ, ಪದ್ಧತಿ ಪ್ರಕಾರ ಪೂಜೆ ಸಲ್ಲಿಸಿದ್ದಾರೆ ಎಂದು ಭಗವತಿ ದೇವಸ್ಥಾನ ಸಮಿತಿಯ ಎಂ.ಎಸ್.ರಮೇಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next