Advertisement

ಶುದ್ಧ ಅಗರಿ ಶೈಲಿಯ ಭಾಗವತ ಸುಬ್ರಾಯ ಭಟ್‌ 

06:00 AM Nov 30, 2018 | Team Udayavani |

ತೆಂಕುತಿಟ್ಟು ಭಾಗವತಿಕೆಯಲ್ಲಿ ಬಲಿಪ ಮತ್ತು ಅಗರಿ ಶೈಲಿ ಬಲು ವಿಶಿಷ್ಟವಾದದು. ಬಲಿಪ ಶೈಲಿಯನ್ನು ಪ್ರಸ್ತುತ ನಾವು ಹಿರಿಯರಾದ ನಾರಾಯಣ ಭಾಗವತ, ಬಲಿಪ ಪ್ರಸಾದ್‌ ಭಟ್‌, ಬಲಿಪ ಶಿವಶಂಕರ್‌ ಭಟ್‌ ಹಾಗೂ ಪುಂಡಿಕಾಯಿ ಗೋಪಾಲ ಕೃಷ್ಣ ಭಟ್‌ ಇವರ ಭಾಗವತಿಕೆಯಲ್ಲಿ ಕೇಳಬಹುದು. ಆದರೆ ಸಂಪೂರ್ಣ ಅಗರಿ ಶೈಲಿಯಲ್ಲೇ ಹಾಡುವ ಭಾಗವತರು ವೃತ್ತಿಪರ ಮೇಳಗಳಲ್ಲಿ ಯಾರೂ ಇಲ್ಲ. ಅಗರಿ ಶೈಲಿಯನ್ನು ಶುದ್ಧವಾಗಿ ಉಳಿಸಿಕೊಂಡು ಹಾಡಬಲ್ಲ ಅಜ್ಞಾತ ಕಲಾವಿದರೊಬ್ಬರು ಇಂದೂ ಇದ್ದಾರೆಂದು ಹೇಳಿದರೆ ಯಾರೂ ನಂಬಲಾರರು. ಅಗರಿ ಶ್ರೀನಿವಾಸ ಭಾಗವತರ ಶಿಷ್ಯ ಗಜಂತೋಡಿ ಸುಬ್ರಾಯ ಭಟ್ಟರೆ ಶುದ್ಧ ಅಗರಿಶೈಲಿಯಲ್ಲಿ ಹಾಡಬಲ್ಲ ಭಾಗವತ. 

Advertisement

 ಸರಕಾರಿ ಶಾಲೆಯ ಶಿಕ್ಷಕರಾಗಿರುವ ಇವರು ಅಗರಿ ಭಾಗವತರ ಶಿಷ್ಯರೆಂದಾಗಲಿ ಆಥವಾ ಇವರ ಅಗರಿ ಶೈಲಿಯ ಭಾಗವತಿಕೆಯ ಬಗ್ಗೆಯಾಗಲಿ ಹೆಚ್ಚಿನವರಿಗೆ ತಿಳಿದಿಲ್ಲ.ಒಂದು ತಿಂಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಪ್ರಚಾರಪತ್ರದ ಭಾಗವತರ ಪಟ್ಟಿಯಲ್ಲಿ “ಅಗರಿ ಶೈಲಿಯ ಗಜಂತೋಡಿ ಸುಬ್ರಾಯ ಭಟ್‌’ ಎಂಬ ಹೆಸರನ್ನು ಕಂಡಾಗ ಬಹಳ ಮಂದಿ ಅಚ್ಚರಿಪಟ್ಟರು. ಅಂದಿನ ಅವರ ಭಾಗವತಿಕೆಯನ್ನು ಕೇಳಿದವರು “ಶುದ್ಧ ಅಗರಿ ಶೈಲಿ’ ಇನ್ನೂ ಜೀವಂತವಾಗಿದೆ ಎಂದು ಸಂತಸಪಟ್ಟರು. 

ಮೂರು ದಶಕಗಳ ಹಿಂದೆಯೇ ಸುಬ್ರಾಯ ಮಾಸ್ಟ್ರೆ ಅಗರಿಯವರಲ್ಲಿ ಭಾಗವತಿಕೆ ಕಲಿತ್ತಿದ್ದರು. ಆದರೆ ಯಕ್ಷಗಾನ ಲೋಕಕ್ಕೆ ಈ ವಿಚಾರ ತುಂಬಾ ತಡವಾಗಿ ತಿಳಿದುಬರಲು ಕಾರಣವೂ ಇದೆ. ಮಂಗಳೂರು ತಾಲೂಕಿನ ಮಳಲಿ ಸಮೀಪದವರಾದ ಗಜಂತೋಡಿ ಸುಬ್ರಾಯ ಭಟ್ಟರು ಎಳವೆಯಲ್ಲಿ ಅಗರಿ ಶ್ರೀನಿವಾಸ ಭಾಗವತರ ಗಾಯನಕ್ಕೆ ಮನಸೋತು ಅವರ ಅಭಿಮಾನಿಯಾದರು. ಮುಂದೆ ಶಿಕ್ಷಕರಾಗಿ ಸರಕಾರಿ ಉದ್ಯೋಗ ಪಡೆದ ಭಟ್ಟರು ಮೂವತೈದನೇ ವಯಸ್ಸಿನಲ್ಲಿ ಭಾಗವತಿಕೆ ಕಲಿಯಲು, ವಿಶ್ರಾಂತ ಜೀವನ ನಡೆಸುತ್ತಿದ್ದ ಅಗರಿ ಶ್ರೀನಿವಾಸ ಭಾಗವತರ ಬಳಿ ಹೋದರಂತೆ. ಆಗ ಅಗರಿಯವರು, ನೀನು ಉದ್ಯೋಗವನ್ನು ತ್ಯಜಿಸಿ ಭಾಗವತಿಕೆಯನ್ನೇ ವೃತ್ತಿಯನ್ನಾಗಿ ತೆಗೆದುಕೊಳ್ಳುವುದಾದರೆ ಖಂಡಿತವಾಗಿಯೂ ಕಲಿಸಲಾರೆ ಎಂದಿದ್ದರಂತೆ.ಏಕೆಂದರೆ ಅಂದಿನ ಕಾಲದಲ್ಲಿ ಯಕ್ಷಗಾನ ಕಲಾವಿದನಿಗೆ ಸಿಗುತ್ತಿದ್ದ ಸಂಭಾವನೆಯಲ್ಲಿ ಜೀವನ ನಡೆಸುವುದೇ ದುಸ್ತರವಾಗಿತ್ತು. ಜೀವನ ಸಾಗಿಸಲು ಕಲಾವಿದರು ಪಡುತ್ತಿದ್ದ ಕಷ್ಟ ಮುಂದೆ ಇವರಿಗೆ ಬಾರದಿರಲಿ ಎಂಬ ದೂರಾಲೋಚನೆ ಅಗರಿಯವರದ್ದು. ಹೀಗೆ ಅಗರಿಯವರಿಗೆ ಕೆಲಸ ಬಿಡುವುದಿಲ್ಲ ಎಂದು ಮಾತು ಕೊಟ್ಟು ಭಾಗವತಿಕೆಯನ್ನು ಕಲಿತ ಸುಬ್ರಾಯ ಭಟ್ಟರು ಮುಂದಕ್ಕೆ ಗುರುಗಳ ಆಶಯದಂತೆ ಯಾವುದೇ ವ್ಯವಸಾಯಿ ಮೇಳವನ್ನು ಸೇರದೆ ಸಂಪೂರ್ಣವಾಗಿ ಶಿಕ್ಷಕ ವೃತ್ತಿ ಮತ್ತು ಕೃಷಿಯಲ್ಲೇ ತೊಡಗಿಕೊಂಡರು. ಸುಮಾರು ಮೂರು ದಶಕಗಳ ಕಾಲ ತಾವು ಕಲಿತ ವಿದ್ಯೆಯನ್ನು ರಂಗದಲ್ಲಿ ಪ್ರಯೋಗಿಸದೇ ಇದ್ದರೂ, ತಮ್ಮ ಗುರುಗಳಿಂದ ಕಲಿತ್ತದ್ದನ್ನು ಈಗಲೂ ಶುದ್ಧವಾಗಿ ಉಳಿಸಿಕೊಂಡಿರುವುದಕ್ಕೆ ಅವರು ಇತ್ತೀಚೆಗೆ ಮೂರು ಕಾರ್ಯಕ್ರಮಗಳಲ್ಲಿ ಮಾಡಿದ ಭಾಗವತಿಕೆಯೇ ಸಾಕ್ಷಿ.

ಅಗಸ್ಟ್‌ ತಿಂಗಳಿನಲ್ಲಿ ಸುಬ್ರಾಯ ಭಟ್ಟರು ಸೇವೆ ಸಲ್ಲಿಸಿ ನಿವೃತರಾದ ಶಾಲೆಯ ವಿದ್ಯಾರ್ಥಿಗಳು ಶ್ರೀ ರಾಮಾಂಜನೇಯ ಯಕ್ಷಗಾನ ಮಂಡಳಿ ಮಳಲಿ ಇವರ ಆಶ್ರಯದಲ್ಲಿ ಮಳಲಿ ಶಾಲೆಯ ಸಭಾಂಗಣದಲ್ಲಿ ಯಕ್ಷಗಾನ ವೈಭವವನ್ನು ಏರ್ಪಡಿಸಿದ್ದರು. ಅಂದು ಸುಬ್ರಾಯ ಭಟ್ಟರು ಅಗರಿಯವರ ಪ್ರಸಿದ್ಧ ಕಲ್ಯಾಣಿ, ಭೀಂ ಫ‌ಲಾಸ್‌, ಮೋಹನ, ನಾಟಿ, ಬಿಲಹರಿ, ಶ್ರೀ, ಹಿಂದೋಳ, ಅರಭಿ, ಭೂಪಾಲಿ ಇತ್ಯಾದಿ ರಾಗಗಳನ್ನು ಬಳಸಿ ಪದಗಳನ್ನು ಹಾಡಿದ ರೀತಿ ರೋಮಾಂಚನವನ್ನುಂಟು ಮಾಡಿತು. ಇವರ ಗಾಯನ ಗಾನವೈಭವದಲ್ಲಿದ್ದ ಇನ್ನಿಬರು ಭಾಗವತರುಗಳಾದ ಶಿವಶಂಕರ ಬಲಿಪ ಹಾಗೂ ಮಹೇಶ್‌ ಕನ್ಯಾಡಿಯವರ ಪ್ರಶಂಸೆಗೂ ಪಾತ್ರವಾಯಿತು. 

ಅನಂತರ ನಡೆದ “ಅಗರಿ ಗಾನ ಸ್ಮರಣೆ’ ಕಾರ್ಯಕ್ರಮದಲ್ಲಿ ಸುಬ್ರಾಯ ಭಟ್ಟರು ತನ್ನ ಗುರುವಿನ ಪುತ್ರ ಅಗರಿ ರಘುರಾಮ ಭಾಗವತರ ಜತೆ ಸುಶ್ರಾವ್ಯವಾಗಿ ಹಾಡಿ ಪ್ರತಿಭೆಯನ್ನು ಮೆರೆದರು. ಇತ್ತೀಚೆಗೆ ಗುರುಪುರದಲ್ಲಿ ನಡೆದ ಯಕ್ಷಗಾನ-ಯಾನ ಕಾರ್ಯಕ್ರಮದಲ್ಲಿ ಸುಬ್ರಾಯ ಭಟ್ಟರು ವೃತಿಪರ ಮೇಳದ ಪ್ರಸಿದ್ಧ ಭಾಗವತರುಗಳಾದ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತು ಪುಂಡಿಕಾಯಿ ಗೋಪಾಲ ಕೃಷ್ಣ ಭಟ್‌ರ ಜತೆ ಅಗರಿ ಶೈಲಿಯಲ್ಲಿ ಹಾಡಿ ರಂಜಿಸಿದರು. ಅಂದು ಅವರು ಹಾಡಿದ ಕೆಲವು ಪದ್ಯಗಳು ಕೇವಲ ಒಂದೆರಡು ನಿಮಿಷಗಳ ಒಳಗೆ ಇದ್ದರೂ ಹಾಡಿದ ರೀತಿ ಹಾಗೂ ಬಳಸಿದ ರಾಗದಿಂದ ಅವು ಮಿಂಚಿನ ಸಂಚಾರವನ್ನುಂಟುಮಾಡಿತು. ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್‌ (ರಿ.), ಉಡುಪಿ-ಬೆಂಗಳೂರು ಇವರು ಸುಬ್ರಾಯ ಭಟ್ಟರ ಅಗರಿ ಶೈಲಿಯ ಭಾಗವತಿಕೆಯ 27 ಮಾದರಿಗಳ ದಾಖಲೀಕರಣ ಮಾಡಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next