ಬಡಗುತಿಟ್ಟಿನ ಖ್ಯಾತ ಭಾಗವತರಾಗಿರುವ ಎಚ್.ಸತೀಶ ಕೆದ್ಲಾಯ ಅವರನ್ನು ಮಾ.30 ರಂದು ದಿಲ್ಲಿಯ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೋಟದ ಕಲಾಪೀಠದ ನರಸಿಂಹ ತುಂಗರು ಏರ್ಪಡಿಸುವ “ವೀರ ಅಭಿಮನ್ಯು’ ಯಕ್ಷಗಾನ ಕಾರ್ಯಕ್ರಮದ ಸಂದರ್ಭದಲ್ಲಿ ಸಮ್ಮಾನಿಸಲಾಗುವುದು. ಗುರು ನೀಲಾವರ ಲಕ್ಷ್ಮೀನಾರಾಯಣಯ್ಯರಲ್ಲಿ ತಾಳಾಭ್ಯಾಸ ಮಾಡಿ, ಚಂದ್ರಹಾಸ ಪುರಾಣಿಕರಲ್ಲಿ ಭಾಗವತಿಕೆಯನ್ನು ಕಲಿತರು. ಮುಂದೆ ಅನಂತಪದ್ಮನಾಭ ಪಾಠಕ್, ಸಂಜೀವ ಸುವರ್ಣ, ಗೋರ್ಪಾಡಿ ವಿಠಲ ಪಾಟೀಲ್ ಮುಂತಾದ ದಿಗ್ಗಜರ ಗರಡಿಯಲ್ಲಿ ಪಳಗಿದವರು ಕೆದ್ಲಾಯರು. ಮುಂದೆ ಅದೇ ಕೇಂದ್ರದಲ್ಲಿ ಗುರುಗಳಾಗಿ ಸೇರಿ ಹದಿನೈದು ವರ್ಷಗಳ ಕಾಲ ಸೇವೆಗೈದರು. ಡಾ| ಶಿವರಾಮ ಕಾರಂತರ ಯಕ್ಷರಂಗದಲ್ಲೂ ಗುರುತಿಸಿಕೊಂಡು ಅವರಿಂದಲೂ ಮೆಚ್ಚುಗೆ ಪಡೆದರು. ಸ್ವಿಝರ್‌ಲ್ಯಾಂಡ್, ಆಸ್ಟ್ರೇಲಿಯಾ, ಚೀನಾ, ಬೆಲ್ಜಿಯಂ ಮುಂತಾದ ದೇಶಗಳಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಗಳಲ್ಲಿ ತನ್ನ ಕಂಠಸಿರಿಯಿಂದ ಪ್ರೇಕ್ಷಕರ ಮನಗೆದ್ದರು. ಕೋಡಿ ಶಂಕರ, ಮೊಳಹಳ್ಳಿ ಹೆರಿಯ, ನೀಲಾವರ ಮಹಾಬಲ ಶೆಟ್ಟಿ, ಮಾರ್ಗೋಳಿ ಗೋವಿಂದ ಶೇರಿಗಾರ್, ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿ, ಚಿಟ್ಟಾಣಿಯಂತಹವರನ್ನು ಕುಣಿಸಿ ಸೈ ಎನಿಸಿಕೊಂಡರು. ಹಾಗೆಯೇ ಶೇಣಿ, ಸಾಮಗರಿಂದಲೂ ಪ್ರಶಂಸಿಸಲ್ಪಟ್ಟರು. ಹಳೇ ಪ್ರಸಂಗವಿರಲಿ ಅಥವಾ ಹೊಸ ಪ್ರಸಂಗವಿರಲಿ ಕೆದ್ಲಾಯರು ರಂಗ ಚೌಕಟ್ಟನ್ನು ಮೀರದೇ, ಅಗ್ಗದ ಪ್ರಚಾರಕ್ಕೆ ಬಲಿಬೀಳದೆ ಭಾಗವತಿಕೆಯ ಮೂಲಕ ಕಥಾ ಚಿತ್ರಣವನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವ ಪರಿ ಮೆಚ್ಚುವಂತಹುದು. ಸ್ವರತ್ರಾಣ, ಪದ್ಯದ ಕುಣಿತಗಳಿಗೆ ದಸ್ತುಗಳನ್ನು ಹೇಳುವ ಕ್ರಮ, ರಂಗದ ಮೇಲಿನ ಹಿಡಿತ ಇವರ ವಿಶೇಷತೆ. ಚಂದ್ರಕಾಂತ ಮೂಡುಬೆಳ್ಳೆ, ಮುದ್ದುಮನೆ ರಾಘವೇಂದ್ರ, ರಾಘವೇಂದ್ರ ಆಚಾರ್ ಜನ್ಸಾಲೆ ಮುಂತಾದ ಖ್ಯಾತ ಭಾಗವತರು ಕೆದ್ಲಾಯರ ಶಿಷ್ಯರೇ ಆಗಿದ್ದಾರೆ.
ಸೂರ್ಯ