Advertisement
ಒಬ್ಬರನ್ನು ಕೊಲ್ಲುವುದು ಸುಲಭ ಆದರೆ ಆತನ ಚಿಂತನೆಗಳನ್ನಲ್ಲ….ಹೀಗೆಂದವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಭಗತ್ ಸಿಂಗ್. ನಾವು ಸತ್ತರೂ ನಮ್ಮ ಚಿಂತನೆಗಳು ಇನ್ನೊಬ್ಬರ ಮನದಲ್ಲಿ ಉಳಿಯುತ್ತದೆ. ಅದು ಅವರಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ ಎಂದ ಭಗತ್ ಸಿಂಗ್ ಕೂಡ ತಮ್ಮ ಮಾತು, ನಡೆ, ನುಡಿಯಿಂದ ಎಲ್ಲ ಹೃದಯದಲ್ಲಿ ಇಂದಿಗೂ ತಮ್ಮ ನೆಲೆಯೂರಿದ್ದಾರೆ. ಸರ್ದಾರ್ ಭಗತ್ ಸಿಂಗ್ ಭಾರತ ಕಂಡ ಅದಮ್ಯ ಕ್ರಾಂತಿಕಾರಿ ಹೋರಾಟಗಾರ. ಬ್ರಿಟಿಷರ ದಾಸ್ಯದಿಂದ ಭಾರತವನ್ನೂ ಮುಕ್ತಗೊಳಿಸಿ, ಸ್ವಾತಂತ್ರ್ಯ ಭಾರತದ ಕನಸು ಕಂಡ ವರು. ಸಣ್ಣ ವಯಸ್ಸಿನಲ್ಲೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಬೀದಿಗಿಳಿದವರು.
ಭಗತ್ ಸಿಂಗ್ 1907ರ ಸೆಪ್ಟಂಬರ್ 28ರಂದು ಪಂಜಾಬ್‌ನ ಬಾಂಗ್ ಎಂಬ ಹಳ್ಳಿಯಲ್ಲಿ ಸಿಖ್ ಧರ್ಮದ ಅನುಯಾಯಿಗಳಾದ ಕಿಶನ್ ಸಿಂಗ್ ಹಾಗೂ ವಿದ್ಯಾವತಿ ಅವರ ಮಗನಾಗಿ ಜನಿಸಿದರು. ಕುಟುಂಬದ ಬಹುತೇಕ ಸದಸ್ಯರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಿಂದ ಭಗತ್ ಸಿಂಗ್ ಕೂಡ ಹೋರಾ ಟದ ಹಾದಿ ಹಿಡಿದರು. ಅಜಿತ್ ಸಿಂಗ್ ಗದರ್ ಪಾರ್ಟಿಯ ಮೂಲಕ ಭೂಗತರಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳನ್ನು ಸಂಘಟಿಸುತ್ತಿದ್ದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಕರೇ ದಂಡೇ ಬೀದಿಗಿಳಿದಿತ್ತು. ಮಂಗಲ್ ಪಾಂಡೆಯ ಮೂಲಕ ಹಚ್ಚಿದ್ದ ಕಿಡಿ, ಅದೂ ಭಗತ್ ಸಿಂಗ್ ಅವರವರೆಗೂ ಹಬ್ಬಿತ್ತು. ಬ್ರಿಟಿಷರ ವಿರುದ್ಧ ಕ್ರಾಂತಿಗೆ ಇದು ಮುನ್ನುಡಿಯಾಯಿತು. ಮನೆಯ ವಾತಾವರಣ ಕೂಡ ಭಗತ್‌ನ್ನು ಕೂಡ ಕ್ರಾಂತಿಕಾರಿಯಾಗುವಂತೆ ಮಾಡಿತು.
Related Articles
Advertisement
ಪ್ರೀತಿ ಎಂಬುದು ಮನುಷ್ಯನ ಪಾತ್ರವನ್ನು ಹೆಚ್ಚಿಸುತ್ತದೆ. ಅವನನ್ನು ಎಂದಿಗೂ ಅದು ಕಡಿಮೆಗೊಳಿಸುವುದಿಲ್ಲ. ಪ್ರೀತಿಯಿಂದ ಪ್ರೀತಿಯು ಪ್ರೀತಿ ಇರುತ್ತದೆ ಎಂದಿರುವ ಭಗತ್ ಸಿಂಗ್‌ರ ಈ ಮಾತುಗಳಲ್ಲಿ ನಾವು ಎಲ್ಲರನ್ನೂ ಪ್ರೀತಿಸಬೇಕು. ಆಗ ಮಾತ್ರ ಎಲ್ಲರಿಂದಲೂ ನಮಗೆ ಪ್ರೀತಿ ಸಿಗುತ್ತದೆ ಎನ್ನುವ ಮಾತೂ ಇದೆ.
ಪ್ರಗತಿಯ ಪಥದಲ್ಲಿ ಸಾಗಬೇಕಾದರೆ ಹಳೆಯ ನಂಬಿಕೆಯನ್ನು ಟೀಕಿಸಲು, ನಿರಾಕರಿಸಲು, ಸವಾಲು ಹಾಕಲು ಸಿದ್ಧರಿರಬೇಕು. ಕೇವಲ ನಂಬಿಕೆ ಮತ್ತು ಮೂಢ ನಂಬಿಕೆ ಮೆದುಳನ್ನು ಮಂದಗೊಳಿಸುತ್ತದೆ ಮತ್ತು ಮನುಷ್ಯನನ್ನು ಪ್ರತಿಗಾಮಿಯನ್ನಾಗಿಸುತ್ತದೆ ಎಂದಿರುವ ಭಗತ್ ಸಿಂಗ್‌ರ ಈ ಮಾತಿ ನಲ್ಲಿ ಸಾಧನೆಯ ಪಥದಲ್ಲಿ ಹೇಗೆ ಸಾಗಬೇಕು ಎಂಬ ಸ್ಪಷ್ಟ ಅರ್ಥವಿದೆ.
ಜೀವನದ ಉದ್ದೇಶ ಮನಸ್ಸನ್ನು ನಿಯಂತ್ರಿಸುವುದಲ್ಲ ಅದರಲ್ಲಿ ಸಾಮರಸ್ಯದ ಭಾವನೆಯನ್ನು ತುಂಬುವುದು. ಮೋಕ್ಷವನ್ನು ಸಾಧಿಸುವುದಲ್ಲ, ಸತ್ಯ, ಸೌಂದರ್ಯ, ಚಿಂತನೆಯಲ್ಲಿ ಅತ್ಯುತ್ತಮವಾದುದನ್ನು ಉಪಯೋಗಿಸುವುದು. ಸಾರ್ವತ್ರಿಕ ಸಹೋದರತ್ವವನ್ನು ಸಾಧಿಸಿವುದು. ಸಮಾಜ, ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಅವಕಾಶದ ಸಮಾನತೆಯಿದ್ದರೆ ಮಾತ್ರ ಇದನ್ನು ಸಾಧಿಸಬಹುದು ಎಂದಿರುವ ಭಗತ್ ಸಿಂಗ್ ಅವರ ಮಾತುಗಳಲ್ಲಿ ಸಮಾನತೆ ಇದ್ದರೆ ಬದುಕಿನಲ್ಲಿ ಎಲ್ಲ ಸಾಧನೆಯೂ ಸಾಧ್ಯವಿದೆ. ಎಲ್ಲರಲ್ಲೂ ಸಹೋದರತೆಯ ಭಾವನೆ ಮೊಳೆಯಬೇಕು. ಆಗ ಮಾತ್ರ ಸಮಾನತೆಯನ್ನು ಸಾಧಿಸಬಹುದು. ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಹುದು ಎನ್ನುವ ಅರ್ಥವೂ ಅಡಗಿದೆ.
ಹೊಂದಾಣಿಕೆ ಎಂದರೆ ಶರಣಾಗತಿ ಎಂದರ್ಥವಲ್ಲ. ಅದು ಒಂದು ಮುಂದಿನ ಹೆಜ್ಜೆ. ವಿಶ್ರಾಂತಿಗೆ ಇರುವ ಅವಕಾಶ. ಅದು ಎಲ್ಲವೂ ಆಗಿರುತ್ತದೆ. ಅದರಲ್ಲಿ ಬೇರೇನೂ ಇರುವುದಿಲ್ಲ ಎಂದಿರುವ ಭಗತ್ ಸಿಂಗ್ ಅವರ ಈ ಮಾತುಗಳಲ್ಲಿ ಬದುಕಿನಲ್ಲಿ ಹೊಂದಾಣಿಕೆ ಬೇಕು. ಆದರೆ ಶರಣಾಗತಿ ಮಾಡಿಕೊಳ್ಳಬಾರದು. ಹೊಂದಾಣಿಕೆಯು ನಮ್ಮ ದಿನೆ ಯೋಜನೆಗೆ ಹೊಸ ದಿಕ್ಕು ತೋರಿಸುತ್ತದೆ. ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ.
ಬಲವಂತ ಮಾಡುವುದು ಆಕ್ರಮಣಕಾರಿ, ಹಿಂಸಾಚಾರಕ್ಕೆ ಪ್ರೇರಣೆಯಾಗುತ್ತದೆ. ಅದು ನೈತಿಕವಾಗಿ ಅಸಮರ್ಥನೀಯ. ಆದರೆ ಕಾನೂನು ಬದ್ಧವಾಗಿದ್ದರೆ ನೈತಿಕ ಸಮರ್ಥನೆಯನ್ನು ಪಡೆಯುತ್ತದೆ ಎಂದಿರುವ ಭಗತ್ ಸಿಂಗ್ ಅವರ ಈ ಮಾತುಗಳಲ್ಲಿ ಕಾನೂನಿಗೆ ಮಾತ್ರ ಅನೈತಿಕಯನ್ನು ನೈತಿಕತೆಯನ್ನಾಗಿ ಮಾಡುವ ಸಾಮರ್ಥ್ಯವಿದೆ. ಯಾವುದೇ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಪ್ರಬಲವಾದ ಕಾನೂನಿನ ಅಗತ್ಯವಿದೆ. ಇಲ್ಲಿನ ಜನಸಾಮಾನ್ಯರ ಅಭಿಪ್ರಾಯಗಳೇ ಕಾನೂನು. ಅದು ಇರುವವರೆಗೆ ಎಲ್ಲವೂ ಪಾವಿತ್ರ್ಯದಿಂದ ಕೂಡಿರುತ್ತದೆ ಎಂದಿದ್ದಾರೆ.
ಶ್ರಮ ಜೀವಿಗಳೆಲ್ಲ ಒಂದಾದರೆ ಬಡವನ್ನು ಶೋಷಿಸುವ ಬಂಡವಾಳಶಾಹಿ, ಸಾಮ್ರಾಜ್ಯಶಾಹಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದಿರುವ ಭಗತ್ ಸಿಂಗ್, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸಾರಿದ್ದಾರೆ. ಒಗ್ಗಟ್ಟಿನಿಂದ ಮಾತ್ರ ಸಮಾಜದ ತಿದ್ದುಪಡಿ ಮಾಡಬಹುದು. ಅನಿಷ್ಟತೆಯನ್ನು ಹೋಗಲಾಡಿಸಬಹುದು ಎಂದಿದ್ದಾರೆ. ಬದುಕಿನ ಅಂತಿಮ ದಿನಗಳಲ್ಲಿ ಪೊಲೀಸ್ ಬಂಧಿಯಾಗಿದ್ದರೂ, ತನಗೆ ಗಲ್ಲು ಶಿಕ್ಷೆಯಾಗುತ್ತದೆ ಎಂದು ತಿಳಿದಿದ್ದರೂ ಯಾವುದಕ್ಕೂ ಹೆದರದ ಭಗತ್ ಸಿಂಗ್ ಜೈಲಿನಲ್ಲಿರುವಾಗ ಲೆನಿನ್, ಮಾರ್ಕ್ಸ್, ಎಂಗೆಲ್ಸ್ ಹಾಗೂ ಕ್ರಾಂತಿಕಾರಿ, ಸಮಾಜವಾದಿಗಳ ಕೃತಿಗಳನ್ನು ಓದುತ್ತಿದ್ದರು. ಇದು ಅವರು ಓದಿಗೆ ಕೊಟ್ಟ ಮಾನ್ಯತೆ, ಕೃತಿಗಳ ಮೌಲ್ಯ ಎಷ್ಟಿದೆ ಹಾಗೂ ಜೀವನ ಪ್ರೀತಿ ಎಂದರೆ ಏನು ಎಂಬುದನ್ನು ಎತ್ತಿ ತೋರಿಸುವಂತಿತ್ತು. 1931ರ ಮಾರ್ಚ್ 23ರಂದು ರಾತ್ರಿ ಗಲ್ಲಿಗೇರಿಸಲಾಯಿತು.
ಹೀಗೆ ತಮ್ಮ ಮಾತುಗಳಿಂದಲೇ ಅನೇಕ ಮಂದಿಗೆ ಸ್ಫೂರ್ತಿಯಾದ ಭಗತ್ ಸಿಂಗ್ ಬ್ರಿಟಿಷ್ ಸಾಮಾಜ್ಯದ ವಿರುದ್ಧ ಸಮರ ಸಾರಿದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಆ ಮೂಲಕ ಬದುಕಿನ ಖುಷಿಯನ್ನು ಕಂಡುಕೊಂಡರು. ಪರಿಸ್ಥಿತಿ ಬದಲಾಗಿದ್ದರೂ ಅವರು ಅಂದು ನುಡಿದ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ.