ವಾಡಿ: ಬ್ರಿಟಿಷ್ ಸರ್ಕಾರ ಮೂವರು ಕ್ರಾಂತಿಕಾರಿಗಳಾದ ಶಹೀದ್ ಭಗತ್‌ಸಿಂಗ್, ಸುಖದೇವ ಮತ್ತು ರಾಜಗುರು ಅವರನ್ನು ಗಲ್ಲಿಗೆ ಹಾಕುವ ದಿನ ಜೈಲಿನ ಗೋಡೆಗಳು ಇಂಕ್ವಿಲಾಬ್ ಘೋಷಣೆ ಕೂಗುತ್ತಿದ್ದವು. ನೇಣು ಹಗ್ಗ ಮರುಗುತ್ತಿತ್ತು. ಜೈಲಿನ ಸಿಬ್ಬಂದಿಗಳು ದುಃಖದಲ್ಲಿದ್ದರು. ಇಡೀ ಭಾರತ ಕಣ್ಣೀರಲ್ಲಿ ಮುಳುಗಿತ್ತು. ಭಗತ್ ಎಂಬ ಕ್ರಾಂತಿಯ ಜ್ಯೋತಿ ಆರುವ ಮೂಲಕ ಲಕ್ಷಾಂತರ ಯುವಜನರ ಎದೆಯಲ್ಲಿ ಹೋರಾಟದ ಕಿಚ್ಚು ಮೂಡಿಸಿತು ಎಂದು ಹೇಳುವ ಮೂಲಕ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ ಭಾವುಕರಾದರು.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಅಲ್ ಅಮೀನ್ ಉರ್ದು ಪ್ರೌಢ ಶಾಲೆಯಲ್ಲಿ ಅಖಿಲ ಭಾರತ ಪ್ರಜಾಸತ್ತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ವತಿಯಿಂದ ಏರ್ಪಡಿಸಲಾಗಿದ್ದ ಕ್ರಾಂತಿಯ ಚಿಲುಮೆ ಶಹೀದ್ ಭಗತ್ ಸಿಂಗ್ ಅವರ 92ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ಪ್ರಖರವಾದ ವಿಚಾರವನ್ನು ಹರಡಲು ಭಗತ್ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಬೀದಿಗಿಳಿದಿದ್ದರು. ಶೋಷಣೆ ಮುಕ್ತ ಸಮಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಜೀವದ ಹಂಗು ತೊರೆದು ಸಂಧಾನತೀತ ಹೋರಾಟ ಕಟ್ಟಿದ ಈ ಯು ಕ್ರಾಂತಿಕಾರಿಗಳ ಜೀವನ ಪ್ರತಿಯೊಬ್ಬ ದೇಶಪ್ರೇಮಿ ವಿದ್ಯಾರ್ಥಿ-ಯುವಕರಿಗೆ ಆದರ್ಶವಾಗಬೇಕು. ಈಡೇರದ ಅವರ ಕನಸನ್ನು ನನಸು ಮಾಡಲು ನಾವುಗಳು ಕ್ರಾಂತಿಕಾರಿ ಹೋರಾಟದ ದೀವಿಗೆ ಹಿಡಿಯಲು ಮುಂದೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಲ್-ಅಮೀನ್ ಉರ್ದು ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಮೆಹೀರಾ ಶಾ ಬೇಗಂ, ಭಗತ್‌ಸಿಂಗ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಎಐಡಿಎಸ್‌ಒ ಕಾರ್ಯದರ್ಶಿ ಗೋವಿಂದ ಯಳವಾರ, ಶಿಕ್ಷಕರಾದ ಸೈಯದ್ ಅಹ್ಮದ್, ಸುಫೀಯಾ ಪರ್ವೀನ್ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗತ್‌ಸಿಂಗ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.