ಕನ್ನಡದಲ್ಲಿ ಇತಿಹಾಸ ಕುರಿತ ಅನೇಕ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಈಗ ಮತ್ತೂಂದು ಸಿನಿಮಾ ಕೂಡ ಸದ್ದಿಲ್ಲದೆಯೇ ಸೆಟ್ಟೇರಿದ್ದು, ಶೇ.60 ರಷ್ಟು ಚಿತ್ರೀಕರಣ ಮುಗಿಸಿದೆ. ಅದು “ಕ್ರಾಂತಿ ವೀರ’. ಈ ಶೀರ್ಷಿಕೆ ಕೇಳಿದಾಕ್ಷಣ, 1972 ರಲ್ಲಿ ಬಂದಿದ್ದ ಡಾ.ರಾಜಕುಮಾರ್ ಅಭಿನಯದ “ಕ್ರಾಂತಿ ವೀರ’ ಚಿತ್ರ ನೆನಪಾಗುತ್ತೆ. ಈಗ ಅದೇ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣವಾಗುತ್ತಿದೆ.
ಇದು ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ್ ಅವರ ಲೈಫ್ಸ್ಟೋರಿಗೆ ಸಂಬಂಧಿಸಿದ ಸಿನಿಮಾ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಭಗತ್ ಸಿಂಗ್ ಕುರಿತ ಸಿನಿಮಾ ಆಗುತ್ತಿರುವುದು ವಿಶೇಷ. ಅಂದಹಾಗೆ, ಈ ಸಿನಿಮಾದಲ್ಲಿ ಭಗತ್ ಸಿಂಗ್ ಆಗಿ, ಎಂ.ಪಿ. ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಆದತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಅಶೋಕ್ ಖೇಣಿ, ಭವಾನಿ ಪ್ರಕಾಶ್, ಮಿತ್ರ, ತೇಜಸ್ ಸೇರಿದಂತೆ ಇತರೆ ಕಲಾವಿದರು ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಏರ್‌ಪೋರ್ಟ್ ಬಳಿ ಲಾಹೋರ್ ಜೈಲ್ ಸೆಟ್ ಹಾಕಿ ಚಿತ್ರೀಕರಿಸುವ ಯೋಚನೆ ನಿರ್ದೇಶಕರಿಗಿದೆ. ಲಾಹೋರ್ ಹೈ ಕೋರ್ಟ್ ಸೆಟ್ ಕೂಡ ಹಾಕಲಾಗುತ್ತಿದ್ದು, ದೊಡ್ಡ ಬಜೆಟ್‌ನಲ್ಲಿ ಜಲಿಯನ್‌ವಾಲಬಾಗ್ ಸೆಟ್ ವೊಂದನ್ನು ಹಾಕುವ ಸಲುವಾಗಿ ಈಗ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಆದತ್.
ಎ.ಆರ್.ರೆಹಮಾನ್ ಪ್ರೊಡಕ್ಷನ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಐವರು ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದು, ಅವರೆಲ್ಲರ ಹೆಸರನ್ನು ಸಿನಿಮಾ ರಿಲೀಸ್ ದಿನವೇ ಹೇಳುವುದಾಗಿ ಹೇಳುತ್ತಾರೆ ಆದತ್. ಚಿತ್ರದ ಸಂಕಲನವನ್ನು ಕೆ.ಎಂ.ಪ್ರಕಾಶ್ ಮಾಡಿದರೆ, ಡಾ.ಲೋಕೇಶ್ ಎಂಬುವರು ಸಂಗೀತ ನೀಡುತ್ತಿದ್ದಾರೆ. ಥ್ರಿಲ್ಲರ್ ಮಂಜು ಮತ್ತು ಜಾಕ್ಸನ್ ವಿನೋದ್ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಇಸ್ಮಾಯಿಲ್ ಅವರ ಕಲಾನಿರ್ದೇಶನವಿದೆ.
ಯೋಗರಾಜ್‌ಭಟ್, ನಾಗೇಂದ್ರಪ್ರಸಾದ್, ರಾಘವೇಂದ್ರ ಕಾಮತ್ ಸಾಹಿತ್ಯ ಬರೆದಿದ್ದಾರೆ. ಅಂದಹಾಗೆ, ಇಂದು (ಮಾ.23) ಭಗತ್‌ಸಿಂಗ್ ಅವರ ಪುಣ್ಯತಿಥಿ. ಈಗಾಗಲೇ ಬಾಲಿವುಡ್‌ನಲ್ಲಿ ಭಗತ್ ಸಿಂಗ್ ಕುರಿತ ಅನೇಕ ಸಿನಿಮಾಗಳು ಬಂದಿವೆ. ಒಂದೇ ದಿನ ಭಗತ್ ಸಿಂಗ್ ಅವರ ಕುರಿತ ಎರಡ್ಮೂರು ಸಿನಿಮಾಗಳು ತೆರೆಕಂಡಿದ್ದು ವಿಶೇಷ. ಈಗ ಕನ್ನಡದಲ್ಲಿ ಭಗತ್ ಸಿಂಗ್ ಲೈಫ್ ಸ್ಟೋರಿ ಕುರಿತ “ಕ್ರಾಂತಿ
ವೀರ’ ಚಿತ್ರ ಆಗುತ್ತಿರುವುದು ಇದು ಮೊದಲು.