ಭದ್ರಾವತಿ: ಜಾಗತಿಕ ಬಂಡವಾಳಗಾರ ಅಮೆರಿಕಾದ ಕಾರ್ಪೋರೆಟ್ ಸಂಸ್ಥೆಗಳಿಗೆ ಶಾಮೀಲಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದೇಶದ ಭವಿಷ್ಯ ರೂಪಿಸುವ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುತ್ತಾ ಮಾರಾಟ ಮಾಡುತ್ತಾ ಹಾಳುಗೆಡವುತ್ತಿವೆ ಎಂದು ಹಿರಿಯ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಹೇಳಿದರು.
ಮಂಗಳವಾರ ಮಧ್ಯಾಹ್ನ ನಗರದ ಹಾಲಪ್ಪ ವೃತ್ತದಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘವು ಕಾರ್ಖಾನೆ ಖಾಸಗೀಕರಣದ ವಿರುದ್ಧ ಹಾಗೂ ಕಾರ್ಖಾನೆ ಉಳಿಸಿ ಹೋರಾಟಕ್ಕಾಗಿ ನಡೆಸಿದ ರಸ್ತೆತಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಎನ್‌ಜಿಎಫ್ ಸೇರಿದಂತೆ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಕೇಂದ್ರ ಸರಕಾರ ಬೀಗ ಜಡಿದು ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ. ಬಿಇಎಲ್ ಕಾರ್ಖಾನೆಯನ್ನು ಮುಚ್ಚಲು ಸಿದ್ಧಪಡಿಸಿದೆ. ಇದರ ಬೆನ್ನಲ್ಲೇ ನೂರು ವರ್ಷ ತುಂಬಿದ ವಿಐಎಸ್‌ಎಲ್ ಕಾರ್ಖಾನೆಯನ್ನು ಮಾರಾಟ ಮಾಡಲು ಜಾಗತಿಕ ಟೆಂಡರ್ ಕರೆದಿದೆ. 1992ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅಮೆರಿಕಾದ ಒತ್ತಡಕ್ಕೆ ಮಣಿದು ಗ್ಯಾಟ್ ಒಪ್ಪಂದಕ್ಕೆ ಸಹಿಹಾಕಿ ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟಿತ್ತು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯ ಎಲ್.ಕೆ. ಆಡ್ವಾಣಿ ಮತ್ತು ವಾಜಪೇಯಿ ಮುಂತಾದವರು ಈ ಒಪ್ಪಂದವನ್ನು ವಿರೋಧಿಸಿದ್ದರು. ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ದೇಶವನ್ನು ಹಾಳುಗೆಡವುತ್ತಿವೆ ಎಂದು ಆಪಾದಿಸಿದರು.
ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಕೇವಲ ಸುಳ್ಳು ಭರವಸೆಗಳನ್ನು ನೀಡಿ, ಕಾರ್ಖಾನೆ ಉಳಿಸಲು ಪ್ರಯತ್ನಿಸಿದೆ ರಾಜಕೀಯ ಶಕ್ತಿಯನ್ನು ಸ್ವಂತಕ್ಕೆ ಬಳಸಿಕೊಂಡು ಪ್ರಸಿದ್ಧ ಇತಿಹಾಸ ಹೊಂದಿರುವ ವಿಐಎಸ್‌ಎಲ್ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಲು ಮುಂದಾಗಿದ್ದಾರೆ. ಕೇಂದ್ರ ಸರಕಾರ ಈ ಕಾರ್ಖಾನೆಯನ್ನು ಖಾಸಗೀಕರಣದ ಹೆಸರಲ್ಲಿ ಮಾರಾಟ ಮಾಡಲು ಮುಂದಾಗಿದೆ ಎಂದರು.
ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್ ಮಾತನಾಡಿ, ನಗರದಲ್ಲಿ ಈಗಾಗಲೇ ಎಂಪಿಎಂ ಕಾರ್ಖಾನೆಯನ್ನು ಮುಚ್ಚಿ ಕಾಗದ ನಗರ ಸ್ಮಶಾನ ಮೌನವಾಗಿದೆ. ಈಗ ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರ ಸರಕಾರ ಮಾರಾಟ ಮಾಡಲು ಹೊರಟು ಗುಜರಿಗೆ ತಳ್ಳುವ ಸಂಚು ಹೂಡಿದೆ. ಇವೆರಡೂ ಕಾರ್ಖಾನೆಗಳನ್ನು ಕಳೆದುಕೊಂಡರೆ ಭದ್ರಾವತಿ ಸಂಪೂರ್ಣವಾಗಿ ಅಧೋಗತಿಗೆ ತಳ್ಳಲ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮತ್ತು ಗುತ್ತಿಗೆ ಕಾರ್ಮಿಕ ಸಂಘಗಳ ಪದಾಧಿಕಾರಿಗಳಾದ ಅನೇಕ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.