ಭದ್ರಾವತಿ: ಪಟ್ಟಣದ ಎಲ್ಲ ಹದಿನೈದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸುರಕ್ಷಿತ ವತಾವರಣದಲ್ಲಿ ಪರೀಕ್ಷೆ ಬರೆಯಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲಾ 15 ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬೆಳಿಗ್ಗೆ7.30ರಿಂದಲೇ ಆಗಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರು. ಅಲ್ಲದೇ, ಕೈಗಳಿಗೆ ಸ್ಯಾನಿಟೈಸರ್ ಹಾಕಿಸಿಕೊಂಡು, ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದರು.
ಪೋಷಕರ ಆತಂಕ: ಒಲ್ಲದ ಮನಸ್ಸಿನಿಂದಲೇ ಪರೀಕ್ಷೆಗೆ ಮಕ್ಕಳನ್ನು ಕಳುಹಿಸಲು ಬಂದಿದ್ದ ಪೋಷಕರು, ಮಕ್ಕಳು ಪರೀಕ್ಷೆ ಬರೆದು ಹೊರಬರುವವರೆಗೂ ಪರೀಕ್ಷಾ ಕೇಂದ್ರದ ಹೊರಗೆ ನಿಂತು ಕಾದು ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದ ದೃಶ್ಯ ಎಲ್ಲಾ ಪರೀಕ್ಷಾ ಕೇಂದ್ರಗಳ ಬಳಿ ಸಾಮಾನ್ಯವಾಗಿತ್ತು.
ಸಮರ್ಪಕ ವ್ಯವಸ್ಥೆ: ಬಿಇಒ ಸೋಮಶೇಖರ್ ಪತ್ರಿಕೆ ಜತೆಗೆ ಮಾತನಾಡಿ, ಪರೀಕ್ಷೆಗೆ ನೋಂದಾಯಿಸಿದ್ದ 4176ವಿದ್ಯಾರ್ಥಿಗಳ ಪೈಕಿ ಮೊದಲ ಬಾರಿಗೆ ಪರೀಕ್ಷೆ ಬರೆದ 3970 ವಿದ್ಯಾರ್ಥಿಗಳೂ ಸೇರಿದಂತೆ 4001 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 175 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ತಿಳಿಸಿದರು. ಕಂಟೇನ್ಮೆಂಟ್ ಝೋನ್‌ನಿಂದ 2 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅನಾರೋಗ್ಯ ಕಾರಣದಿಂದ ಬಳಲುತ್ತಿದ್ದ 8 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಯವುದೇ ರೀತಿ ನಕಲು ನಡೆದಿಲ್ಲ. ಖಾಸಗಿ ವಸತಿ ನಿಲಯಗಳಿಂದ 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲಾ 77 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 15 ಸಾರಿಗೆ ಬಸ್‌ಗಳಲ್ಲಿ 250 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.