ಭದ್ರಾವತಿ: ಭಾಷೆ ಭಾವನೆಗಳನ್ನು ಮಾತಿನ ಮೂಲಕ ಅಭಿವ್ಯಕ್ತಪಡಿಸುವ ಮಾಧ್ಯಮ ಎಂದು ಶಿಕ್ಷಕ ಡಾ| ಬಿ.ಎನ್. ತಂಬೂಳಿ ಹೇಳಿದರು.
ಮಂಗಳವಾರ ಸಂಜೆ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಂಯುಕ್ತಾಶ್ರಯದಲ್ಲಿ ವಿಶ್ವಮಾತೃಭಾಷಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಾತೃಭಾಷಾ-ಮಹತ್ವ ಒಂದು ಚಿಂತನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಂಜ್ಞೆಯ ಮೂಲಕ ಎಲ್ಲವನ್ನೂ ಮತ್ತೂಬ್ಬರಿಗೆ ಅರ್ಥವಾಗುವಂತೆ ಹೇಳುವುದು ಅಸಾಧ್ಯ. ಆದರೆ ಭಾಷೆಯಿಂದ ಎಲ್ಲವನ್ನೂ ಹೇಳಲು ಸಾಧ್ಯ. ಸಂಬಂಧಗಳಲ್ಲಿ ತಾಯಿಗಿಂತ ಮಿಗಿಲಾದ ಸಂಬಂಧವಿಲ್ಲ. ಅದೇ ರೀತಿ ನಾವು ಎಷ್ಟೇ ಭಾಷೆ ಕಲಿತರೂ ನಮಗೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕಿಂತ ಮಿಗಿಲಾದ ಮತ್ತೂಂದು ಭಾಷೆ ಇರಲು ಸಾಧ್ಯವಿಲ್ಲ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು ಈ ಬಾಷೆಯ ಪ್ರತಿಯೊಂದು ಅಕ್ಷರಕ್ಕೂ ವೈಜ್ಞಾನಿಕ ಸಂಬಂಧವಿದೆ. ಒಂದು ಕಾಲದಲ್ಲಿ ದೇವಭಾಷೆ ಎನಿಸಿದ್ದ ಸಂಸ್ಕೃತ ಭಾಷೆ ಈಗ ಶೋಕೇಸ್ ಸೇರಿದೆ. ಆದರೆ ಕನ್ನಡ ಭಾಷೆ ನಿರಂತರವಾಗಿ ಬೆಳೆದು ಉಳಿದು ಬಂದಿದೆ. ಕನ್ನಡ ಭಾಷಾ ಬೆಳವಣಿಗೆಯಲ್ಲಿ ಪಂಪ, ರನ್ನ, ರಾಘವಾಂಕ ಸೇರಿದಂತೆ ಅನೇಕರ ಕೊಡುಗೆ ಅಪಾರ. ಅನ್ಯಭಾಷೆಗಳನ್ನು ಕಲಿಯಿರಿ. ಆದರೆ ಕನ್ನಡ ಭಾಷೆಗೆ ದೇವರ ಕೋಣೆಗೆ ನೀಡುವಷ್ಟರ ಮಟ್ಟಿಗೆ ಪಾವಿತ್ರ್ಯತೆಯನ್ನು ನೀಡಿ ಜೀವನದ ಪ್ರತಿಹಂತದಲ್ಲಿಯೂ ಕನ್ನಡವನ್ನು ಬಳಸಬೇಕು ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಇತಿಹಾಸವನ್ನು ಅವಲೋಕಿಸಿದಾಗ ಗಾಂಧಿ, ಅಂಬೇಡ್ಕರ್ ಅವರಂತಹ ಮಹಾ ಪುರುಷರು ಜೀವನದ ಸಾಮಾಜಿಕ ಕಳಕಳಿಯ ಹೋರಾಟದಲ್ಲಿ ಅನುಭವಿಸಿದ ನೋವು, ಅವಮಾನ ಅವರಲ್ಲಿ ಹಿಡಿದ ಗುರಿ ಸಾ ಧಿಸಲೇಬೇಕೆಂಬ ಛಲವನ್ನು ದೃಢಗೊಳಿಸಿತು. ಆ ಎಲ್ಲಾ ನೋವಿನ್ನು ನುಂಗಿಕೊಂಡು ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಸಾಗಿದ ಪರಿಣಾಮವಾಗಿ ಸಮಾಜಕ್ಕೆ ಅವರಿಂದ ಉತ್ತಮ ಕೊಡುಗೆ ಲಭಿಸಿತು ಎಂಬುದನ್ನು ನಾವು ಮರೆಯಬಾರದು ಎಂದರು.
ಶಿಕ್ಷಕ ಚಂದ್ರಪ್ಪ ಕನ್ನಡ ಗೀತೆ ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಗಲೂರು ತಿಪ್ಪೇಸ್ವಾಮಿ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾ ಕಾರಿ ಎಚ್.ಚಿದಾನಂದ ಉದ್ಘಾಟಿಸಿದರು. ರತ್ನಮ್, ಅಪ್ನಾದೇಶ್ ಅಸೋಸಿಯೇಶನ್ ರಾಜ್ಯ ಸಂಚಾಲಕ ಸಿ.ಎಂ. ರಮೇಶ್ ವಿದ್ಯಾರ್ಥಿ ನಿಲಯದ ಲಕ್ಷ್ಮೀ ಇದ್ದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಕ್ಷ್ಮೀ ನಿರೂಪಿಸಿದರು. ಶಶಿ ವಂದಿಸಿದರು.