Advertisement

ಪ್ರತಿಯೊಬ್ಬರಿಗೂ ಆತ್ಮವೇ ಮಿತ್ರ-ಶತ್ರು

04:22 PM Dec 16, 2019 | Naveen |

ಭದ್ರಾವತಿ: ಪ್ರತಿಯೊಬ್ಬ ವ್ಯಕ್ತಿಗೂ ಅವನ ಅಂತರಾತ್ಮವೇ ನಿಜವಾದ ಶತ್ರು ಅಥವಾ ಮಿತ್ರ ಎಂದು ಜೈನ ತೇರಾಪಥ್‌ ಧಾರ್ಮಿಕ ಸಂಪ್ರದಾಯದ ಹನ್ನೊಂದನೇ ಆಚಾರ್ಯರಾದ ಜೈನಮುನಿ ಆಚಾರ್ಯ ಮಹಾಶ್ರಮಣಜೀ ಹೇಳಿದರು.

Advertisement

ವ್ಯಸನಮುಕ್ತ, ಸದ್ಭಾವನಾ, ಸಾಮರಸ್ಯ ಸಮಾಜದ ನಿರ್ಮಾಣಕ್ಕಾಗಿ ಕೈಗೊಂಡಿರುವ ಅಹಿಂಸಾ ಸಂಕಲ್ಪ ಯಾತ್ರೆಯ ಅಂಗವಾಗಿ ಅವರು ಭಾನುವಾರ ನಗರಕ್ಕೆ ಆಗಮಿಸಿ, ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಗರದ ಜೈನ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಐಹಿಕ ಜೀವನದಲ್ಲಿ ನಾವು ಭಾವಿಸುವ ಮಿತ್ರರು ನಿಜವಾದ ಮಿತ್ರರಲ್ಲ. ಯಾರು ಜೀವನದಲ್ಲಿ ಸತ್ಯ,ಅಹಿಂಸೆ,ಪರೋಪಕಾರ, ಸಹನೆ, ಮೃದುತ್ವ, ಸಂತೋಷ, ಪ್ರಾಮಾಣಿಕತೆಯಂತಹ ಉದಾತ್ತ ಭಾವನೆಗಳನ್ನು ಆತ್ಮದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮ ಮಾರ್ಗದಲ್ಲಿ ಸಾಗುತ್ತಾರೆಯೋ ಅಂತಹವರಿಗೆ ಅವರ ಆತ್ಮವೇ ನಿಜವಾದ ಮಿತ್ರ. ಇದಕ್ಕೆ ವಿರುದ್ಧವಾಗಿ ಯಾರು ಅಸತ್ಯ, ಹಿಂಸೆ, ಅಹಂಕಾರ, ಕಪಟ, ಪರಪೀಡನೆ, ಅಸಹಿಷ್ಣುತೆ, ಅಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಾರೋ ಅವರಿಗೆ ಅವರ ಆತ್ಮವೇ ನಿಜವಾದ ಶತ್ರು.

ರಾಗದ್ವೇಷಾದಿ ಗುಣಗಳನ್ನು ತೊರೆದು ಗುರುವಿನ ಮಾರ್ಗದರ್ಶನದಲ್ಲಿ ಸದಾಚಾರ ಚಾರಿತ್ರ್ಯವುಳ್ಳವರಾಗಿ ನಡೆದಾಗ ಅವರಿಗೆ ಶಾಂತಿ ಲಭಿಸುತ್ತದೆ. ಉದಾತ್ತ ಗುಣಗಳನ್ನು ಹೊಂದಲು ಆ ಮಾರ್ಗದಲ್ಲಿ ಪರಿಶ್ರಮವಾದ ಕಠಿಣ ಪ್ರಯತ್ನ ಅತ್ಯಗತ್ಯ ಎಂದರು.

ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಷ್ಟು ಮುಖ್ಯವೋ ಅದನ್ನು ಸಾ ಧಿಸಲು ಅನುಸರಿಸುವ ಮಾರ್ಗವೂ ಸಹ ಅಷ್ಟೇ ಕಠಿಣವಾಗಿರುತ್ತದೆ. ಆ ರೀತಿ ಕಠಿಣ ಹಾದಿಯಲ್ಲಿ ಸಾಗುವ ಸಂಕಲ್ಪ ಮಾಡಿ ನಡೆದಾಗ ಶಾಂತಿಯುತವಾದ ಮೋಕ್ಷ ಮಂದಿರ ಲಭಿಸುತ್ತದೆ.

Advertisement

ಪ್ರತಿಯೊಬ್ಬರೂ ಇದನ್ನು ಸಾ ಧಿಸಲು ಸಮರಸತೆ, ನೈತಿಕತೆ ಮತ್ತು ವ್ಯಸನಮುಕ್ತ ಜೀವನವನ್ನು ಸಾಗಿಸುವ ಸಂಕಲ್ಪ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಆಚಾರ್ಯರು ಸಾಮೂಹಿಕವಾಗಿ ಅಹಿಂಸಾ ಸಂಕಲ್ಪಯಾತ್ರೆಯ ಸಂಕಲ್ಪವನ್ನು ಬೋಧಿಸಿದರು. ಅನೇಕ ಪುರುಷರು ಮತ್ತು ಮಹಿಳೆಯರು ಸಾಮರಸ್ಯದಿಂದ, ಪ್ರಾಮಾಣಿಕವಾದ ಜೀವನದೊಂದಿಗೆ, ಮದ್ಯ, ಗುಟ್ಕಾ, ಬೀಡಿ, ಸಿಗರೇಟ್‌ನಂತಹ ವ್ಯಸನಗಳಿಂದ ಮುಕ್ತವಾದ ಜೀವನ ನಡೆಸುತ್ತೇವೆ ಎಂದು ಸಂಕಲ್ಪ ಮಾಡಿದರು.

ಶಾಸಕ ಬಿ.ಕೆ. ಸಂಗಮೇಶ್‌ ಮಾತನಾಡಿ, ಗುರುಗಳು ದೈವಸ್ವರೂಪರಾಗಿದ್ದು ತತ್ವಪ್ರಸಾರದ ಜೊತೆಗೆ ಕಾಲ್ನಡಿಗೆಯಲ್ಲಿ ಭಾರತದಾದ್ಯಂತ ಸಂಚರಿಸಿ ತಮ್ಮ ಭಾವಪೂರ್ಣ ಪ್ರವಚನದ ಮೂಲಕ ಜನರಲ್ಲಿ ಸದ್ಭಾವನೆ, ಸಾಮರಸ್ಯ, ವ್ಯಸನಮುಕ್ತ ಜೀವನ ನಡೆಸಲು ಜನರಿಗೆ ಉಪದೇಶಿಸುತ್ತಾ ಸಮಾಜಕ್ಕೆ ಒಳಿತು ಮಾಡಲು ಬಂದಿರುವ ಆಚಾರ್ಯ ಮಹಶ್ರಮಣಜೀ ಅವರ ಆಗಮನದಿಂದ ಭದ್ರಾವತಿ ಪುನೀತವಾಗಿದೆ ಎಂದರು.

ದಿನೇಶ್‌ ಮುನೀಜಿ ಪ್ರವಚನ ನೀಡಿ, ಕರ್ಮಬಂಧನದಿಂದ ಮುಕ್ತರಾಗುವ ದಿಸೆಯಲ್ಲಿ ಸಾಗಲು ಶ್ರದ್ಧೆ ಅಗತ್ಯವಾಗಿದೆ. ಭಗವಾನ್‌ ಮಹಾ‌ವೀರರ ತತ್ವ- ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಜೀವನದ ಮರಮೋತ್ಛ ಶಾಂತಿ ಲಭಿಸುತ್ತದೆ ಎಂದರು. ಹಲವು ಜೈನ ಮುನಿಗಳು ಇದ್ದರು.

ಜೈನ ಸಮಾಜದ ಮಹಿಳೆಯರು ಭಗವಾನ್‌ ಮಹಾವೀರರ ಕುರಿತ ಹಾಡನ್ನು ಹಾಡಿದರು. ಜೈನ ಸಮಾಜದ ಮುಖಂಡರಾದ ಗೀಸ್‌ಲಾಲ್‌, ರಾಜ್‌ ಕುಮಾರ್‌, ರತನ್‌ಲಾಲ್‌ ಸೇರಿದಂತೆ ಅನೇಕರು, ಮಾಜಿಶಾಸಕ ಎಂ.ಜೆ. ಅಪ್ಪಾಜಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next