Advertisement

ಭಗವಂತನ ಲೀಲೆಗಳಿಂದ ಉತ್ತಮ ಸಂದೇಶ: ಸ್ವಾಮೀಜಿ

06:31 PM Dec 14, 2019 | Naveen |

ಭದ್ರಾವತಿ: ಭಗವಂತನ ಪ್ರತಿಯೊಂದು ಲೀಲೆಗಳಲ್ಲೂ ಉತ್ತಮ ಸಂದೇಶಗಳು ಅಡಗಿರುತ್ತವೆ. ಆದರೆ ಅದನ್ನು ಶಾಸ್ತ್ರಗಳ ಹಿನ್ನೆಲೆಯಲ್ಲಿ ಸರಿಯಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಉಡುಪಿ ಅದಮಾರು ಮಠದ ಶ್ರೀಗಳಾದ ಶ್ರೀ ಈಶಪ್ರಿಯತಿರ್ಥ ಸ್ವಾಮೀಜಿ ಹೇಳಿದರು.

Advertisement

ಅವರು ಜ.18ರಂದು ಉಡುಪಿಯ ಶ್ರೀಕೃಷ್ಣನ ಪರ್ಯಾಯ ಪೀಠವನ್ನು ಅಲಂಕರಿಸುತ್ತಿರುವ ಪ್ರಯುಕ್ತ ಪರ್ಯಾಯ ಉತ್ಸವಕ್ಕೆ ಭದ್ರಾವತಿ ಜನರಗೆ ಆಹ್ವಾನ ನೀಡುವ ಸಲುವಾಗಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮತ್ತು ಶ್ರೀ ವಾದಿರಾಜ ಸ್ವಾಮಿಗಳ ಮಠಕ್ಕೆ ಆಗಮಿಸಿದ ವೇಳೆ ಅವರು ಆಶೀರ್ವಚನ ನೀಡಿದರು.ಬಾಲಗೋಪಾಲನಾಗಿ ಶ್ರೀಕೃಷ್ಣ ಗೋಪಾಲಕರನ್ನು ರಕ್ಷಿಸುವ ಸಲುವಾಗಿ ಸರೋವರದಲ್ಲಿದ್ದ ಕಾಳಂಗ ಸರ್ಪವನ್ನು ಮರ್ಧನ ಮಾಡಿದ. ಗೋವು ಎಂದರೆ ಕೇವಲ ಹಸು ಎಂಬುದಷ್ಟಕ್ಕೇ ಸೀಮಿತವಲ್ಲ. ವೇದಗಳನ್ನೂ ಸಹ ಗೋವು ಎನ್ನುತ್ತಾರೆ. ವೇದಗಳನ್ನು ಅಧ್ಯಯನ ಮಾಡುವ, ಅದರ ನೀತಿ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವೇದಗಳನ್ನು ಪಾಲನೆ ಮಾಡುವವರ ರಕ್ಷಣೆಯನ್ನು ಭಗವಂತ ಮಾಡುತ್ತಾನೆ ಎಂಬ ಸಂದೇಶವನ್ನು ಕಾಳಂಗ ಮರ್ಧನ ಲೀಲೆಯಿಂದ ಶ್ರೀಕೃಷ್ಣ ಜಗತ್ತಿಗೆ ಸಾರಿದ ಸಂದೇಶವಾಗಿದೆ ಎಂದರು.

ಕಾಳಿಂಗ ಮರ್ಧನ ಲೀಲೆಯಲ್ಲಿ ಕಾಳಿಂಗ ಸರ್ಪ ಬೇರೆಡೆಗೆ ತೆರಳಲು ತನಗೆ ಗರುಡನ ಭಯವಿದೆ ಎಂದು ಹೇಳಿದಾಗ, ಕಾಳಿಂಗ ಸರ್ಪಕ್ಕೆ ಕೃಷ್ಣ ಅಭಯವನ್ನು ನೀಡಿ ನಿನ್ನ ತಲೆಯ ಮೇಲೆ ನಾನು ನರ್ತಿಸಿರುವುದರಿಂದ ತಲೆಯ ಮೇಲೆ ನನ್ನ ಪಾದದ ಚಿಹ್ನೆಬಿದ್ದಿದೆ. ಆದ್ದರಿಂದ ಗರುಡ ನಿನಗೆ ಏನನ್ನೂ ಮಾಡುವುದಿಲ್ಲ ಹೋಗುಎಂದು ಹೇಳುತ್ತಾನೆ. ಇದನ್ನು ನಾವು ಅವಲೋಕಿಸಿದಾಗ ಯಾರ ತಲೆಯಲ್ಲಿ ಭಗವಂತನ ಕುರಿತಾದ ಚಿಂತನೆಗಳು ಸದಾ ಜಾಗೃತವಾಗಿರುತ್ತವೆಯೋ ಅಂತಹವರಿಗೆ ಭಗವಂತ ಸದಾ ರಕ್ಷಣೆ ನೀಡುತ್ತಾನೆ ಎಂಬ ಸಂದೇಶ ಅಡಗಿದೆ ಎಂದು ವಿವರಿಸಿದರು.

ಶ್ರೀಕೃಷ್ಣನ ತೊಟ್ಟಿಲ ಪೂಜೆ: ಅನುಗ್ರಹ ಸಂದೇಶದ ನಂತರ ಶ್ರೀಗಳು ಮಠದಲ್ಲಿ ಕಾಳಿಂಗಮರ್ಧನ ಶ್ರೀಕೃಷ್ಣನ ತೊಟ್ಟಿಲ ಪೂಜೆ ನೆರವೇರಿಸಿ ಫಲಮಂತ್ರಾಕ್ಷತೆ ನೀಡಿದರು. ವಿವಿಧ ಸಂಘ-ಸಂಸ್ಥೆಗಳಿಂದ ಶ್ರೀಗಳಿಗೆ ಗೌರವ ಫಲಸಮರ್ಪಣೆ ಮಾಡಲಾಯಿತು. ಪಂಡಿತರಾದ ಗೋಪಾಲಾಚಾರ್‌, ಗಂಟೆನಾರಾಯಣಾಚಾರ್‌, ಶೇಷಗಿರಿ ಆಚಾರ್‌, ಅರ್ಚಕರಾದ ಸತ್ಯನಾರಾಯಣ್‌, ಮಾಧುರಾವ್‌, ಮಠದ ಮುಖ್ಯಸ್ಥರಾದ ಮುರಳೀಧರ ತಂತ್ರಿ, ಜಿ. ರಮಾಕಾಂತ, ವೆಂಕಟೇಶ್‌, ಜಯತೀರ್ಥ, ವಾಸು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next