Advertisement

ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಟೆಂಡರ್‌?

11:40 AM Jul 05, 2019 | Naveen |

ಭದ್ರಾವತಿ: ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯನ್ನು ಮಾರಾಟ ಮಾಡಲು ಗುರುವಾರ ಜಾಗತಿಕ ಟೆಂಡರ್‌ ಕರೆಯುವ ಮೂಲಕ ಕಾರ್ಖಾನೆ ಖಾಸಗೀಕರಣಗೊಳ್ಳುವುದು ಖಚಿತವಾಗಿದೆ.

Advertisement

ಸರ್‌.ಎಂ. ವಿಶ್ವೇಶ್ವರಯ್ಯನವರ ತಂತ್ರಜ್ಞಾನದಲ್ಲಿ 1918ರಲ್ಲಿ ಸ್ಥಾಪಿತವಾದ ಸಾರ್ವಜನಿಕ ವಲಯದ ವಿಐಎಸ್‌ಎಲ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಮಾರಲು ಕೇಂದ್ರ ಉಕ್ಕು ಪ್ರಾಧಿಕಾರ ಜಾಗತಿಕ ಟೆಂಡರ್‌ ಕರೆಯುವ ಮೂಲಕ ಕಾರ್ಖಾನೆ ಖಾಗೀಕರಣಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಗುರುವಾರ ಘೋಷಿಸಿರುವುದು ಇಲ್ಲಿನ ಕಾರ್ಮಿಕರಿಗೆ ಮತ್ತು ನಾಗರಿಕರಿಗೆ ದೊಡ್ಡಮಟ್ಟದ ಶಾಕ್‌ ನೀಡಿದಂತಾಗಿದೆ. ಖಾಸಗೀಕರಣದ ವಿರುದ್ಧ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಕಾರ್ಖಾನೆಯ ಕಾರ್ಮಿಕ ಸಂಘ ಗುತ್ತಿಗೆ ಕಾರ್ಮಿಕರ ಸಂಘ ಇಲ್ಲಿನ ಸ್ಥಳೀಯ ರಾಜಕೀಯ ಮುಖಂಡರ ಸಭೆಯನ್ನು ಗುರುವಾರ ಸಂಜೆ ಕರೆಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವತ್ತ ಹೆಜ್ಜೆ ಹಾಕಿದೆ.

ಮೂಗಿಗೆ ತುಪ್ಪ ಸವರಿದರು: ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನಾಯಕರು ಅನೇಕ ಬಾರಿ ಭದ್ರಾವತಿಗೆ ಬಂದು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಅಗತ್ಯ ಬಂಡವಾಳ ತೊಡಗಿಸಲಾಗುವುದು. ಸ್ಥಗಿತಗೊಂಡಿರುವ ಘಟಕಗಳನ್ನು ಶೀಘ್ರದಲ್ಲಿ ಪುನರಾರಂಭಿಸಲು ಅಗತ್ಯವಾದ ಪ್ರಕ್ರಿಯೆ ನಡೆಯುತ್ತಿದೆ ಎಂದು ನೀಡಿದ ಭರವಸೆಗಳಿಂದ ಹಾಗೂ ಅದಕ್ಕೆ ಪೂರಕವಾಗಿ ಕಾರ್ಖಾನೆಗೆ ಭೇಟಿ ನೀಡಿದ್ದ ಕೇಂದ್ರ ಉಕ್ಕು ಸಚಿವರ ಹೇಳಿಕೆ ಎಲ್ಲವೂ ಇಲ್ಲಿನ ಕಾರ್ಮಿಕರ ಮನದಾಳದಲ್ಲಿ ಕಾರ್ಖಾನೆ ಖಾಸಗೀಕರಣ ಗೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುತ್ತದೆ ಎಂಬ ಅತಿಯಾದ ವಿಶ್ವಾಸವನ್ನು ಹೊಂದಿದ್ದರು. ಈ ಎಲ್ಲಾ ಭರವಸೆಗಳು ಈಗ ಹುಸಿಯಾಗಿದ್ದು ಕೇಂದ್ರ ಸರ್ಕಾರ ಕಾರ್ಖಾನೆಯ ಖಾಸಗೀಕರಣ ಗೊಳ್ಳುವ ಮೊದಲ ಪ್ರಕ್ರಿಯೆಯಾಗಿ ಜಾಗತಿಕ ಟೆಂಡರ್‌ ಕರೆದಿರುವುದರಿಂದ ಇದುವರೆಗೆ ಕಾರ್ಖಾನೆಯ ಬಗ್ಗೆ ಬಿಜೆಪಿ ನಾಯಕರು ನೀಡುತ್ತಾ ಬಂದಿದ್ದ ಭರವಸೆಗಳೆಲ್ಲ ಕಾರ್ಮಿಕರ ಹಾಗೂ ಇಲ್ಲಿನ ನಾಗರಿಕರ ಮೂಗಿಗೆ ತುಪ್ಪಸವರಿದಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲೆ ಕೇಳುತ್ತಿದೆ.

ಅಪ್ಪ-ಮಗ ಸೇರಿ ಭದ್ರಾವತಿ ಜನತೆಗೆ ಮೋಸ ಮಾಡಿದರು: ಕಾರ್ಖಾನೆಯ ಖಾಸಗೀಕರಣಕ್ಕಾಗಿ ಕೇಂದ್ರ ಸರ್ಕಾರ ಕರೆದಿರುವ ಟೆಂಡರ್‌ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸದ ಫಲವಾಗಿ ಹಾಗೂ ಅವರಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾರ್ಖಾನೆ ಇಂದು ಖಾಸಗೀಕರಣದತ್ತ ಜಾರಿದೆ. ಸಂಸದ ರಾಘವೇಂದ್ರ ಮತ್ತು ಯಡಿಯೂರಪ್ಪ ಸೇರಿ ಭದ್ರಾವತಿ ಜನತೆಗೆ ಮೋಸ ಮಾಡಿದ್ದಾರೆ. ನಾನು ಇಂದು ಬೆಂಗಳೂರಿನಲ್ಲಿದ್ದು ಭದಾವತಿಗೆ ಬಂದು ಎಲ್ಲರೊಡನೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿತ್ತೇನೆ ಎಂದರು.

ಹೋರಾಟ ಅನಿವಾರ್ಯ: ಈ ಕುರಿತಂತೆ ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್‌ ಅವರನ್ನು ಸಂಪರ್ಕಿಸಿದಾಗ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರ ಕಾರ್ಮಿಕರಿಗೆ ತೀವ್ರ ನಿರಾಸೆ ಯುಂಟುಮಾಡಿದ್ದು ಈಗ ಎಲ್ಲರೂ ಒಂದಾಗಿ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ಸಂಯುಕ್ತವಾಗಿ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಇಲ್ಲಿನ ರಾಜಕೀಯ ನಾಯಕರ ಹಾಗೂ ಮುಖಂಡರ ಜೊತೆ ಕಾರ್ಮಿಕ ಸಂಘ ಮತ್ತು ಗುತ್ತಿಗೆ ಕಾರ್ಮಿಕರ ಸಂಘ ಸಭೆ ಸೇರಿ ಚರ್ಚಿಸಿ ಮುಂದಿನ ಕ್ರಮ ಏನೆಂದು ನಿರ್ಧರಿಸಲಾಗುವುದು ಎಂದರು.

Advertisement

ಕಾರ್ಖಾನೆ ಖಾಸಗೀಕರಣಗೊಳ್ಳುವುದಿಲ್ಲ ಎಂಬ ಆಶಾಭಾವನೆ ಇದೆ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್‌ ಅವರು ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಮತ್ತು ಮಾಜಿ ಮುಖ್ಯಮತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾರ್ಖಾನೆಯನ್ನು ಸಾರ್ವಜನಿಕ ವಲಯದ ಉದ್ದಿಮೆಯಾಗಿ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಈಗ ಕಾರ್ಖಾನೆಯ ಕುರಿತು ಕೇಂದ್ರ ಸರ್ಕಾರ ಜಾಗತಿಕ ಟೆಂಡರ್‌ ಕರೆದಿದ್ದರೂ ಸಹ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ಇನ್ನೂ ಅವಕಾಶ ಇರುವುದರಿಂದ ಬಿ.ವೈ. ರಾಘವೇಂಧ್ರ ಮತ್ತು ಮಾಜಿ ಮುಖ್ಯಮತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ರಾಜ್ಯದ ಸಂಸದರು ಆ ಕೆಲಸವನ್ನು ಮಾಡುತ್ತಾರೆಂಬ ಭರವಸೆಯಿದೆ. ಊರಿನ ನಾಗರಿಕನಾಗಿ ನಾನೂ ಸಹ ಕಾರ್ಖಾನೆ ಸಾರ್ವಜನಿಕ ವಲಯದಲ್ಲಿ ಉಳಿದು ಅಭಿವೃದ್ಧಿಗೊಳ್ಳಬೇಕೆಂದು ಬಯಸುತ್ತೇನೆ ಎಂದರು.

ಕಾರ್ಮಿಕರ ಹಿತಾಸಕ್ತಿ ಪರಿಗಣನೆ: ಕಾರ್ಖಾನೆಯ ಕುರಿತು ಜಾಗತಿಕ ಟೆಂಡರ್‌ ಕರೆಯುವ ಪ್ರಕ್ರಿಯೆ ಸಹಜವಾಗಿದ್ದು ಈ ಹಿಂದೆಯೂ ಸಹ ಟೆಂಡರ್‌ ಕರೆಯಲಾಗಿತ್ತು. ಆದರೆ ಯಾರೂ ಬರಲಿಲ್ಲ. ಈಗಲೂ ಸಹ ಕರೆಯಲಾಗಿದೆಯಾದರೂ ಕಾರ್ಖಾನೆಯನ್ನು ಸಾರ್ವಜನಿಕ ವಲಯದ ಉದ್ದಿಮೆಯಾಗಿ ಉಳಿಸಿಕೊಳ್ಳಲು ಪ್ರಯತ್ನ ನಡೆಯುತ್ತಲೇ ಇದ್ದು ಸದನದಲ್ಲಿ ಸಂಸದ ರಾಘವೇಂದ್ರ ಅವರು ಈ ಬಗ್ಗೆ ಸಮರ್ಪಕವಾಗಿ ಅಭಿವ್ಯಕ್ತಪಡಿಸಿದ್ದಾರೆ. ಏನೇ ಆದರೂ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಹಾಗೂ ಖಾಯಂ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡವುವ ಎಲ್ಲಾ ಪ್ರಯತ್ನವನ್ನು ಮಾಡಲಾಗುತ್ತದೆ ಎಂಬ ಭರವೆಸೆಯಿದೆ ಎಂದರು.

ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ಮೋಸ: ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಕೇಂದ್ರದ ಬಿಜೆಪಿ ನಾಯಕರು ಅನೇಕ ಬಾರಿ ಭದ್ರಾವತಿಗೆ ಬಂದು ಸಾರ್ವಜನಿಕವಾಗಿ ಸಭೆ ನಡೆಸಿ ಭರವಸೆ ನೀಡಿದ್ದರು. ಆದರೂ ಈಗ ಕಾರ್ಖಾನೆ‌ಯನ್ನು ಖಾಸಗೀಕರಣಗೊಳಿಸಲು ಟೆಂಡರ್‌ ಕರೆದಿರುವುದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸುತ್ತದೆ. ಕಾರ್ಮಿಕರು ತೆಗದುಕೊಳ್ಳುವ ಎಲ್ಲಾ ರೀತಿಯ ಹೋರಾಟಕ್ಕೆ ಪಕ್ಷವು ಬೆಂಬಲಿಸುತ್ತದೆ ಎಂದು ಕಾಂಗ್ರೆಸ್‌ ನಗರಾಧ್ಯಕ್ಷ ಟಿ.ಚಂದ್ರೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next