Advertisement

ವೇದನೆಯಲ್ಲೂ ಸಾಧನೆ ಮೆರೆದ ವಿದ್ಯಾರ್ಥಿಗಳು

12:24 PM May 03, 2019 | Naveen |

ಭದ್ರಾವತಿ: ಕಳೆದ ವರ್ಷ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಸಂಭವಿಸಿದ್ದ ಬಸ್‌ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪಟ್ಟಣದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವಿದ್ಯಾಭ್ಯಾಸ ಮಾಡಿದ ಶಾಲೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.

Advertisement

ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ ನಂದಿನಿ ಹಾಗೂ ಆಕೆಯ ಸಹ ವಿದ್ಯಾರ್ಥಿಗಳು ಈ ಬಾರಿಯ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಪಘಾತದಿಂದಾದ ಆಘಾತ: ಕಳೆದ 2018ರ ನವೆಂಬರ್‌ನಲ್ಲಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ 10ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳಿದ್ದ ಬಸ್‌ ನರಸಿಂರಾಜಪುರದ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿತ್ತು. ಪರಿಣಾಮ ಶಿಕಾವತ್‌ ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದರೆ ನಂದಿನಿ ಎಂಬ ಬಾಲಕಿಯ ಬಲಗೈ ತುಂಡಾಗಿ , ಎಡಗೈಗೂ ತೀವ್ರ ಸ್ವರೂಪದ ಗಾಯವಾತ್ತು. ಅದೇ ರೀತಿ ಸಂಜನಾ ಉಡುಪ, ವಿಕ್ರಂ ಪಟೇಲ್, ಕಿಷನ್‌, ಸುಮುಖ್‌, ಸುಶಾಂತ್‌, ವೈಷ್ಣವಿ, ಕೀರ್ತಿ, ಸುಶಾಂತ್‌ ಸಿಂಗಾಡೆ ಮುಂತಾದ ಅನೇಕ ವಿದ್ಯಾರ್ಥಿಗಳಿಗೆ ಅಪಘಾತದಲ್ಲಿ ಗಾಯವಾಗಿತ್ತು. ಅವರೆಲ್ಲರು ಈ ಅಪಘಾತದಿಂದ ಘಾಸಿಗೊಳಗಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದರು.

ಎಸ್‌ಎಸ್‌ಎಲ್ಸಿ ವಿದ್ಯಾರ್ಥಿ ಗಳಾಗಿದ್ದರಿಂದ ಕಲವೇ ತಿಂಗಳಲ್ಲಿ ಬರಲಿದ್ದ ಎಸ್‌ಎಸ್‌ಎಸ್‌ಎಲ್ಸಿ ಪಬ್ಲಿಕ್‌ ಪರೀಕ್ಷೆಯನ್ನು ಹೇಗೆ ಬರೆಯುವುದು ಎಂಬ ಚಿಂತೆ ಆ ಎಲ್ಲಾ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಮತ್ತು ಶಾಲಾ ಶಿಕ್ಷಕ ವರ್ಗದಲ್ಲಿ ಮನೆ ಮಾಡಿತ್ತು. ಆದರೆ ಮನಸಿದ್ದರೆ ಮಾರ್ಗವೂ ತೆರೆದಿರುತ್ತದೆ ಎಂಬಂತೆ ಈ ಎಲ್ಲ ವಿದ್ಯಾರ್ಥಿಗಳು ಅಪಘಾತದಿಂದಾದ ದೈಹಿಕ ಮತ್ತು ಮಾನಸಿಕ ಆಘಾತವನ್ನು ಮೀರಿ ನಿರಂತರ ಪರಿಶ್ರಮದಿಂದ ಎಸ್‌ಎಸ್‌ಎಲ್ಸಿ ಎಂಬ ಪರೀಕ್ಷೆಯ ಸಾಗರವನ್ನು ಈಜಿ ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿ ವೇದನೆಯಲ್ಲಿಯೂ ಸಾಧನೆ ಮೆರೆದಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ನಂದಿನಿ ಎಂಬ ವಿದ್ಯಾರ್ಥಿನಿ ಅಪಘಾತದಿಂದ ಬಲಗೈ ತುಂಡಾಗಿ ಕೈ ಕಳೆದುಕೊಂಡು ಎಡಗೈಗೂ ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಸಹ ಛಲ ಬಿಡದೆ ಅತಿಹೆಚ್ಚಿನ ಪರಿಶ್ರಮದಿಂದ ಅಭ್ಯಾಸ ಮಾಡಿ ಶಿಕ್ಷಣ ಸಂಸ್ಥೆಯ ಅನುಮತಿ ಪಡೆದು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರವನ್ನು ಹೇಳುತ್ತಾ ಸಹಾಯಕ ವಿದ್ಯಾರ್ಥಿಯ ಮೂಲಕ ಪ್ರಶ್ನೆ ಪತ್ರಿಕೆ ಬರೆದು 600 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

Advertisement

ಯಶಸ್ಸಿಗೆ ಸತತ ಪ್ರಯತ್ನವೇ ಕಾರಣ: ಪತ್ರಿಕೆಯೊಂದಿಗೆ ಈ ಕುರಿತು ಮಾತನಾಡಿದ ನಂದಿನಿ, ಅಪಘಾತದಲ್ಲಿ ನಾನು ಕಳೆದುಕೊಂಡ ಕೈ ಬಗ್ಗೆ ನಾನು ಮನಸ್ಸಿಗೆ ಗಂಭೀರವಾಗಿ ತೆಗೆದುಕೊಳ್ಳದೆ ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಆ ದಿಸೆಯಲ್ಲಿ ಸತತ ಪ್ರಯತ್ನ ಮಾಡಿದೆ. ಅಪಘಾತದ ನಂತರ ನಾವು ಶಾಲೆಗೆ ಹೋಗದಿದ್ದ ದಿನಗಳ ಪಠ್ಯದ ಪಾಠವನ್ನು ಶಾಲೆಯಲ್ಲಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ನಮಗೆ ವಿಶೇಷ ತರಗತಿಗಳ ಮೂಲಕ ಕಲಿಸಿದರು. ಮನೆಯಲ್ಲಿ ಪೋಷಕರೂ ಸಹ ಹೆಚ್ಚಿನ ಆಸಕ್ತಿ ವಹಿಸಿ ನಮಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಇದೆಲ್ಲದರ ಪರಿಣಾಮ ನಾನು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ತಾವು ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿಗೆ ಸೇರಬೇಕೆಂಬ ಇಚ್ಛೆ ಹೊಂದಿರುವುದಾಗಿ ಹೇಳಿದರು.

ತಂದೆ ಸೋಮನಾಥ್‌:ನಂದಿನಿಯ ತಂದೆ ಸೋಮನಾಥ್‌ ತರೀಕೆರೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು ಮಗಳು ಮಾಡಿರುವ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದರೊಂದಿಗೆ ಮಗಳ ಎಡಗೈ ಗಾಯವನ್ನು ಸರಿಪಡಿಸಲು ತಮಿಳುನಾಡಿನ ಗಂಗಾ ಆಸ್ಪತ್ರೆಯಲ್ಲಿ ವೈಯಕ್ತಿಕ ಹಣದಿಂದ ಚಿಕಿತ್ಸೆ ನೀಡಲಾಯಿತು. ಶಿಕ್ಷಣ ಸಂಸ್ಥೆ ಇದಕ್ಕೆ ಯಾವುದೇ ವೆಚ್ಚ ನೀಡಲಿಲ್ಲ, ಕೇವಲ ತುಂಡಾದ ಬಲಗೈ ಚಿಕಿತ್ಸಾ ವೆಚ್ಚವನ್ನು ಮಾತ್ರ ಭರಿಸಿದೆ ಎಂದು ತಮ್ಮ ನೋವನ್ನು ತೋಡಿಕೊಂಡು, ಇಂತಹ ನೋವಿನಲ್ಲೂ ಮಗಳು ಮಾಡಿರುವ ಸಾಧನೆಯನ್ನು ನೆನೆದು ಸಂತಸ ಹಂಚಿಕೊಂಡು, ಮಗಳು ನಂದಿನಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣವನ್ನು ಮುಂದುವರಿಸಲು ಇಚ್ಚಿಸಿದ್ದಾಳೆ ಎನ್ನುತ್ತಾರೆ.

ಸಂಜನಾ ಉಡುಪ: 614 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿನಿ ಸಂಜನಾ ಉಡುಪ ಅಪಘಾತದಲ್ಲಿ ತಲೆಗೆ ಸ್ವಲ್ಪ ಹೊಡೆತ ಬಿದ್ದು ಚಿಕಿತ್ಸೆ ಪಡೆದಿದ್ದಳು. ಈಕೆ ಪತ್ರಿಕೆಯೊಂದಿಗೆ ಮಾತನಾಡಿ, ನನ್ನ ಆಪ್ತ ಮಿತ್ರಳಾಗಿದ್ದ ಶಿಖಾವತ್‌ ಅಪಘಾತದಲ್ಲಿ ಮೃತಪಟ್ಟ ಘಟನೆಯ ಶಾಖ್‌ ನನಗೆ ಬಹಳ ದಿನ ಕಾಡಿತು. ಜೊತೆಗೆ ತಲೆ, ಕೈ- ಕಾಲಿಗೆ ಆದ ಅಲ್ಪ ಸ್ವಲ್ಪ ಗಾಯಗಳೂ ಸಹ ನನಗೆ ಆಘಾತವುಂಟು ಮಾಡಿತಾದರೂ ಶಾಲೆಯಲ್ಲಿ ಶಿಕ್ಷಕ ವರ್ಗ ನಮ್ಮ ಬಗ್ಗೆ ತೆಗೆದುಕೊಂಡ ಮುತುವರ್ಜಿ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಉಡುಪಿ ಶ್ರೀಗಳು ಆಗಿಂದಾಗ್ಗೆ ಶಾಲೆಗೆ ಬಂದು ಅಪಘಾತದಲ್ಲಿ ನೊಂದ ವಿದ್ಯಾರ್ಥಿಗಳಿಗೆ ನಡೆಸಿದ ಕೌನ್ಸೆಲಿಂಗ್‌ ಎಲ್ಲವೂ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಲೇಬೇಕೆಂಬ ಒತ್ತಾಸೆಗೆ ಕಾರಣವಾಯಿತು. ಈಗ ನಾನು ಪಡೆದಿರುವ ಅಂಕಗಳಿಗಿಂತ ನನಗೆ ಹೆಚ್ಚಿನ ಅಂಕಗಳು ಬರಬೇಕಿತ್ತು. ಆದ್ದರಿಂದ ನಾನು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಿದ್ದೇನೆ ಎಂದು ಹೇಳಿದರು.

ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಮರೇಗೌಡ ಅವರು ಪತ್ರಿಕೆಯೊಂದಿಗೆ ಮಾತನಾಡಿ, ನವೆಂಬರ್‌ ಮಾಸದಲ್ಲಿ ಶಾಲಾ ಶೈಕ್ಷಣಿಕ ಪ್ರವಾಸದ ಬಸ್‌ ಅವಘಡದಿಂದ ತೊಂದರೆಗೊಳಗಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಲಾಗಿತ್ತು. ಆಎಲ್ಲಾ ವಿದ್ಯಾರ್ಥಿಗಳು ದೈಹಿಕ ನೋವಿನಲ್ಲೂ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿರುವುದು ನಮ್ಮ ಶಿಕ್ಷಣ ಸಂಸ್ಥೆಗೆ ಸಂತಸ ತಂದಿದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಸಾಧನೆಯ ಹಾದಿಯಲ್ಲಿ ಏನೇ ವೇದನೆ ಎದುರಾದರೂ ಅದನ್ನು ಮೆಟ್ಟಿ ನಿಂತು ಪರೀಕ್ಷೆಯಲ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಅತ್ಯುತ್ತಮ ಅಂಕ ಗಳಿಸಿದ ಈ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ನಂದಿನಿಗೆ ಎಲ್ಲೆಡೆ ಅಭಿಮಾನದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next