Advertisement

ಅನಧಿಕೃತ ಪಾಸ್‌ ವ್ಯವಸ್ಥೆಗೆ ಕಡಿವಾಣ ಹಾಕಲು ಆಗ್ರಹ

01:37 PM Jan 01, 2020 | Naveen |

ಭದ್ರಾವತಿ: ನಗರದ ಹೊಯ್ಸಳರ ಕಾಲದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಧನುರ್ಮಾಸದಲ್ಲಿ ನಡೆಯುತ್ತಾ ಬರುತ್ತಿರುವ ವೈಕುಂಠ ಏಕಾದಶಿ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿದೆ.

Advertisement

ಎರಡು ದಿನಗಳ ಕಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳು ದೇವರ ದರ್ಶನ ಪಡೆದು ಹೋಗುತ್ತಾರೆ. ದೇವಾಲಯದ ಒಳಾವರಣದಲ್ಲಿ ಕೃತಕವಾಗಿ ನಿರ್ಮಿಸುವ ರಾಜಗೋಪುರ ಸಹಿತವಾದ ಸಪ್ತದ್ವಾರಗಳ ವೈಕುಂಠದ ಅಲಂಕಾರ ಮತ್ತು ಅದರಲ್ಲಿ ಶೇಷ ವಾಹನ ಶಾಯಿ ಶ್ರೀಲಕ್ಷ್ಮೀ ಸಹಿತನಾದ ವೈಕುಂಠನಾಥನ ಮೂರ್ತಿಯ ದರ್ಶನ ಪಡೆಯಲು ವೈಕುಂಠ ಏಕಾದಶಿಯಂದು ಬೆಳಗಿನ 3 ಗಂಟೆಯಿಂದಲೆ ಧನುìಮಾಸದ ಚಳಿಯನ್ನೂ ಲೆಕ್ಕಿಸದೆ ಜನರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ.ಬೆಳಗ್ಗೆ 5 ಗಂಟೆಗೆ ಅರ್ಚಕರು ವೈಕುಂಠದ ಬಾಗಿಲನ್ನು ಪೂಜಿಸಿ ಸಪ್ತದ್ವಾರಗಳು ತೆರೆದುಕೊಳ್ಳುತ್ತಿದ್ದಂತೆ ಜನರು ಉತ್ಛಸ್ವರದಲ್ಲಿ ಗೋವಿಂದ ನಾಮಸ್ಮರಣೆ ಮಾಡುತ್ತಾ ದೇವರ ದರ್ಶನ ಮಾಡುತ್ತಾರೆ.

ದೇವಾಲಯವು ಮುಜರಾಯಿ ಇಲಾಖೆಯ ಆಡಳಿತಕ್ಕೆ ಸೇರಿದ್ದು ತಹಶೀಲ್ದಾರರು ಇದರ ಮುಖ್ಯಸ್ಥರಾಗಿರುತ್ತಾರೆ. ಈ ದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಣೆ ಆರಂಭವಾಗಿ ಸುಮಾರು ಒಂದೂವರೆ ದಶಕಗಳಾಗಿರಬಹುದು. ಅದಕ್ಕೆ ಪೂರ್ವದಲ್ಲಿ ಇಲ್ಲಿ ಈ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಈ ನೂತನ ಕಾರ್ಯಕ್ರಮ ಆರಂಭಗೊಂಡ ನಂತರ ವರ್ಷದಿಂದ ವರ್ಷಕ್ಕೆ ಇದರ ಆಕರ್ಷಣೆ ಹೆಚ್ಚಾಗಿದೆ.

ಬೆಳಗ್ಗೆಯಿಂದ ರಾತ್ರಿ 12 ಗಂಟೆಯವರೆಗೆ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಮರುದಿನ ಮುಕ್ಕೋಟಿ ದ್ವಾದಶಿ ದಿನ ಸಂಜೆ 5 ಗಂಟೆಯಿಂದ ಆರಂಭಗೊಳ್ಳುವ ದೇವರ ದರ್ಶನದ ಕರ್ಯಕ್ರಮ ರಾತ್ರಿ 12ರವರೆಗೆ ನಿರಂತರವಾಗಿರುತ್ತದೆ ಎರಡೂ ದಿನಗಳ ಕಾಲ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಡೆದುಬಂದು ನಿಂತು ದೇವರ ದರ್ಶನ ಪಡಯುತ್ತಾರೆ.

ಪಾಸ್‌ ಹಾವಳಿ: ಆರಂಭಿಕ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಎಲ್ಲರಿಗೂ ಸಾಮಾನ್ಯ ಸರತಿ ಸಾಲಿನ ವ್ಯವಸ್ಥೆಯಿತ್ತು. ಆದರೆ ವರ್ಷದಿಂದ ವರ್ಷಕ್ಕೆ ವೈಕುಂಠನಾಥನ ಅಲಂಕಾರ ದ್ವಿಗುಣಗೊಳ್ಳುತ್ತಾ ಹೋದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳ ಸಂಖ್ಯೆ ಸಹ ಅಧಿಕಗೊಳ್ಳುತ್ತಾ ಸಾಗಿದೆ. ದೇವಾಲಯವು ಮುಜರಾಯಿಗೆ ಸೇರಿದ್ದರೂ ಸಹ ಅಲ್ಲಿನ ಅರ್ಚಕರು ಹಾಗೂ ದೇವಾಲಯದ ಅಭಿಮಾನಿ ಭಕ್ತಾದಿಗಳು ದೇವಾಲಯದ ಭಕ್ತಾದಿಗಳಿಂದ ಕಾರ್ಯಕ್ರಮಕ್ಕಾಗಿ ಸಂಗ್ರಹಿಸುವ ಹಣದಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.

Advertisement

ಈ ರೀತಿ ಸಾರ್ವಜನಿಕವಾಗಿ ಹಣ ಸಂಗ್ರಹಿಸಿ ಮಾಡುವ ಕಾರ್ಯಕ್ರಮದಲ್ಲಿ ದಾನಿಭಕ್ತರಿಗೆ ಹಾಗೂ ವಿಐಪಿಗಳಿಗೆ ವೈಕುಂಠನಾಥನ ದರ್ಶನಕ್ಕೆ ವಿಶೇಷ ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಕಳೆದ ಮೂರು ವರ್ಷಗಳ ಹಿಂದಿನಿಂದ ಜಾರಿಗೆ ತಂದಿತು. ಈ ರೀತಿ ಜಾರಿಗೆ ತಂದ ಪಾಸ್‌ ವ್ಯವಸ್ಥೆ ಆರಂಭಿಕ ವರ್ಷಗಳಲ್ಲಿ ನಿಯೋಜಿತ ಯಶಸ್ಸನ್ನು ನೀಡಿತಾದರೂ ಬರು ಬರುತ್ತಾ ಕಳೆದ ಕೆಲವು ವರ್ಷಗಳಿಂದ ಇದೇ ಪಾಸ್‌ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದೆ.

ದೇವರ ದರ್ಶನಕ್ಕೆಂದು ಗಂಟೆ ಗಟ್ಟಲೆ ಬಿಸಿಲಲ್ಲಿ ಸರತಿ ಸಾಲಿನಲ್ಲಿ ನಿಂತು ಬರುವ ಸಾಮಾನ್ಯ ಭಕ್ತಾದಿಗಳಿಗೆ ಪಾಸ್‌ ವ್ಯವಸ್ಥೆಯಿಂದ ತುಂಬಾ ತೊಂದರೆ ಆಗುತ್ತಿದ್ದು ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಕಳೆದ ವರ್ಷದ ಕಾರ್ಯಕ್ರಮದಲ್ಲಿ ನಕಲಿ ಪಾಸ್‌ಗಳು ಸಹ ಕಾಣಿಸಿಕೊಂಡು ಸಾಮಾನ್ಯ ಭಕ್ತರ ಸರತಿ ಸಾಲಿಗಿಂತ ಪಾಸ್‌ ಹೊಂದಿದ್ದವರ ಕ್ಯೂ ಅಧಿಕವಾಗಿತ್ತು. 2020ರ ಜ. 6ರಂದುವೈಕುಂಠ ಏಕಾದಶಿ ಕಾರ್ಯಕ್ರಮ ನಡೆಯಲಿದ್ದು ದೇವರ ದರ್ಶನಕ್ಕೆ ಬಿಸಿಲಲ್ಲಿ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ನಡೆದು ಬರುವ ಸಾಮಾನ್ಯ ಭಕ್ತಾದಿಗಳಿಗೆ ತೊಂದರೆ ಆಗದ ರೀತಿ ಸಂಬಂಧಪಟ್ಟವರು ಅಧಿಕ ಪಾಸ್‌ ಗಳನ್ನು ನೀಡದೆ, ಮಿತ ಸಂಖ್ಯೆಯ ಪಾಸ್‌ಗಳನ್ನು ಮಾತ್ರ ವಿತರಣೆ ಮಾಡುವುದರ ಜೊತೆಗೆ ನಕಲಿ ಪಾಸ್‌ಗಳ ಹಾವಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂಬುದು ಸಾಮಾನ್ಯ ಭಕ್ತಾದಿಗಳ ಅಭಿಪ್ರಾಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮುಜರಾಯಿ ಇಲಾಖೆ ಅ ಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳೂ ಆದ ತಹಶೀಲ್ದಾರರು ಗಮನ ಹರಿಸಬೇಕಿದೆ.

ಕೆ.ಎಸ್‌. ಸುಧೀಂದ್ರ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next